ವೆನೆಝುವೆಲಾಗೆ ತೈಲ ಟ್ಯಾಂಕರ್ ಪ್ರವೇಶಕ್ಕೆ ದಿಗ್ಬಂಧನ: ಟ್ರಂಪ್ ಆದೇಶ

ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್, ಡಿ.17: ನಿರ್ಬಂಧಕ್ಕೆ ಗುರಿಯಾಗಿರುವ ತೈಲ ಟ್ಯಾಂಕರ್ಗಳು ವೆನೆಝುವೆಲಾ ಪ್ರವೇಶಿಸುವುದನ್ನು ತಡೆಗಟ್ಟಲು ಆದೇಶಿಸಿರುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ವೆನೆಝುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ವಿರುದ್ಧದ ಒತ್ತಡವನ್ನು ತೀವ್ರಗೊಳಿಸಿದ್ದಾರೆ.
ವೆನೆಝುವೆಲಾ ಮಾದಕ ವಸ್ತು ಕಳ್ಳಸಾಗಣೆ ಹಾಗೂ ಇತರ ಅಪರಾಧಗಳಿಗೆ ಹಣ ಒದಗಿಸಲು ತೈಲದ ಆದಾಯವನ್ನು ಬಳಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.
`ನಮ್ಮ ತೈಲ, ಭೂಮಿ ಹಾಗೂ ಇತರ ಆಸ್ತಿಗಳನ್ನು ಕದ್ದಿರುವುದು , ಭಯೋತ್ಪಾದನೆ, ಮಾದಕ ವಸ್ತು ಕಳ್ಳಸಾಗಣೆ, ಮಾನವ ಕಳ್ಳಸಾಗಣೆ ಸೇರಿದಂತೆ ಹಲವಾರು ಕಾರಣಕ್ಕಾಗಿ ವೆನೆಝುವೆಲಾದ ಆಡಳಿತವನ್ನು `ವಿದೇಶಿ ಭಯೋತ್ಪಾದಕ ಸಂಘಟನೆ'ಯೆಂದು ಗೊತ್ತುಪಡಿಸಲಾಗಿದೆ. ನಿರ್ಬಂಧಕ್ಕೆ ಒಳಗಾಗಿರುವ ಎಲ್ಲಾ ತೈಲ ಟ್ಯಾಂಕರ್ ಗಳು ವೆನೆಝುವೆಲಾ ಪ್ರವೇಶ ಮತ್ತು ಅಲ್ಲಿಂದ ನಿರ್ಗಮಿಸುವುದಕ್ಕೆ ಸಂಪೂರ್ಣವಾಗಿ ತಡೆಯೊಡ್ಡಲು ನಾನು ಆದೇಶಿಸಿದ್ದೇನೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಕಳೆದ ವಾರ ವೆನೆಝುವೆಲಾ ಕರಾವಳಿಯ ಬಳಿ ಅಮೆರಿಕಾದ ಪಡೆಗಳು ತೈಲ ಟ್ಯಾಂಕರ್ ಅನ್ನು ವಶಕ್ಕೆ ಪಡೆದಿದ್ದವು. ಇದರ ಜೊತೆಗೆ, ಅಮೆರಿಕಾದ ಹನ್ನೆರಡಕ್ಕೂ ಅಧಿಕ ಸಮರ ನೌಕೆಗಳು, ವಿಮಾನವಾಹಕ ಯುದ್ಧನೌಕೆ, ಸಾವಿರಾರು ಯೋಧರನ್ನು ಕೆರಿಬಿಯನ್ ಸಮುದ್ರ ವಲಯಕ್ಕೆ ಸ್ಥಳಾಂತರಿಸಲಾಗಿದೆ.
ಈ ಮಧ್ಯೆ, ಮಂಗಳವಾರ ಸಂಜೆ ರಾಜಧಾನಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವೆನೆಝುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ `ಸಾಮ್ರಾಜ್ಯಶಾಹಿ ಮತ್ತು ಫ್ಯಾಸಿಸ್ಟ್ ಶಕ್ತಿಗಳು ವೆನೆಝುವೆಲಾದ ಇಂಧನ, ಗ್ಯಾಸ್, ಚಿನ್ನ ಮತ್ತಿತರ ಖನಿಜಗಳ ಮೇಲೆ ಕಣ್ಣುಹಾಕಿವೆ. ನಮ್ಮ ತಾಯ್ನಾಡನ್ನು ರಕ್ಷಿಸಿಕೊಳ್ಳಲು ನಾವು ದೃಢನಿರ್ಧಾರ ಮಾಡಿದ್ದೇವೆ. ವೆನೆಝುವೆಲಾದಲ್ಲಿ ಶಾಂತಿ ಜಯಿಸುತ್ತದೆ' ಎಂದು ಹೇಳಿದ್ದಾರೆ.







