ಗಾಝಾ ಮೇಲೆ ಬಾಂಬ್ ದಾಳಿ ನಿಲ್ಲಿಸುವಂತೆ ಟ್ರಂಪ್ ಆದೇಶ

PC: x.com/thehill
ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿರುವ ಶಾಂತಿಸೂತ್ರದ ಹಿನ್ನೆಲೆಯಲ್ಲಿ, 2023ರ ಅ.7ರ ದಾಳಿಯ ವೇಳೆ ಸೆರೆಹಿಡಿದಿದ್ದ ಎಲ್ಲ ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಒಪ್ಪಿಕೊಂಡ ಬೆನ್ನಲ್ಲೇ, ತಕ್ಷಣವೇ ಗಾಝಾ ಮೇಳಿನ ಬಾಂಬ್ ದಾಳಿಯನ್ನು ಸ್ಥಗಿತಗೊಳಿಸುವಂತೆ ಅಮೆರಿಕದ ಅಧ್ಯಕ್ಷರು ಇಸ್ರೇಲ್ ಗೆ ಸೂಚನೆ ನೀಡಿದ್ದಾರೆ.
ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ ವಿವರವಾದ ಶಾಂತಿ ಒಪ್ಪಂದದ ಬಗ್ಗೆ ಚರ್ಚಿಸಲು ಸಂಧಾನ ಮಾತುಕತೆಗೆ ಸಿದ್ಧ ಎಂದು ಇದಕ್ಕೂ ಮುನ್ನ ಹಮಾಸ್ ಹೇಳಿಕೆ ನೀಡಿತ್ತು.
"ಹಮಾಸ್ ಇದೀಗ ಬಿಡುಗಡೆ ಮಾಡಿದ ಹೇಳಿಕೆಯ ಆಧಾರದಲ್ಲಿ ಅವರು ಶಾಂತಿಗೆ ಸಿದ್ಧವಿದ್ದಾರೆ ಎನ್ನುವುದು ನನ್ನ ನಂಬಿಕೆ" ಎಂದು ಟ್ರಂಪ್ ಟ್ರುಥ್ ಸೋಶಿಯಲ್ನಲ್ಲಿ ಹೇಳಿದ್ದಾರೆ.
"ಗಾಝಾದ ಮೇಲೆ ಬಾಂಬ್ ದಾಳಿಯನ್ನು ಇಸ್ರೇಲ್ ತಕ್ಷಣವೇ ನಿಲ್ಲಿಸಬೇಕು. ಈ ಮೂಲಕ ನಾವು ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಹಾಗೂ ತ್ವರಿತವಾಗಿ ಕರೆ ತರಬಹುದು! ನಾವು ಈಗಾಗಲೇ ವಿವರಗಳನ್ನು ಚರ್ಚಿಸಬೇಕಿದೆ. ಇದು ಗಾಝಾಕ್ಕೆ ಮಾತ್ರ ಸೀಮಿತವಲ್ಲ; ಇಡೀ ಮಧ್ಯಪ್ರಾಚ್ಯ ಬಯಸುತ್ತಿರುವ ಶಾಂತಿಗೆ ಇದು ಮುಖ್ಯ" ಎಂದು ಟ್ರಂಪ್ ವಿವರಿಸಿದ್ದಾರೆ.
ರವಿವಾರ ಸಂಜೆಯೊಳಗೆ ಶಾಂತಿ ಒಪ್ಪಂದಕ್ಕೆ ಒಪ್ಪಿಕೊಳ್ಳದಿದ್ದರೆ ಪರಿಣಾಮ ಎದುರಿಸಬೇಕು ಎಂದು ಟ್ರಂಪ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಹಮಾಸ್ ಹೇಳಿಕೆ ನೀಡಿತ್ತು.







