ನೈಜೀರಿಯಾದ ಐಸಿಸ್ ನೆಲೆಗಳ ಮೇಲೆ ದಾಳಿಗೆ ಟ್ರಂಪ್ ಆದೇಶ

ವಾಷಿಂಗ್ಟನ್: ವಾಯವ್ಯ ನೈಜೀರಿಯಾದಲ್ಲಿ ಐಸಿಸ್ ಉಗ್ರರ ನೆಲೆಗಳ ಮೇಲೆ "ಪ್ರಬಲ ಮತ್ತು ಮಾರಕ ದಾಳಿ" ನಡೆಸುವಂತೆ ಆದೇಶಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ. ಈ ಭಾಗದಲ್ಲಿ ಕ್ರಿಶ್ಚಿಯನ್ನರನ್ನು ಗುರಿ ಮಾಡಿ ಐಸಿಸ್ ಉಗ್ರರು ಹತ್ಯೆ ಮಾಡುತ್ತಿರುವುದಕ್ಕೆ ಪ್ರತೀಕಾರವಾಗಿ ದಾಳಿ ನಡೆಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಟ್ರುತ್ ಸೋಶಿಯಲ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಟ್ರಂಪ್, ಕಮಾಂಡರ್ ಇನ್ ಚೀಫ್ ಆಗಿ ನಾನು ನೀಡಿದ ನಿರ್ದೇಶನದನ್ವಯ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ. ಐಸಿಸ್ ಉಗ್ರರನ್ನು ಗುರಿ ಮಾಡಿ ದಾಳಿ ನಡೆಸಲಾಗಿದೆ ಎಂದಿದ್ದಾರೆ.
"ಅಮಾಯಕ ಕ್ರಿಶ್ಚಿಯನ್ನರನ್ನು ಮಾರಕವಾಗಿ ಹತ್ಯೆ ಮಾಡಲಾಗುತ್ತಿದ್ದು, ಹಲವು ವರ್ಷಗಳಲ್ಲಿ ಮಾತ್ರವಲ್ಲ; ಹಲವು ಶತಮಾನಗಳಲ್ಲಿ ಕೂಡಾ ಇಂಥ ಹತ್ಯೆಯ ಮಟ್ಟವನ್ನು ಕಂಡಿಲ್ಲ" ಎಂದಿದ್ದಾರೆ.
"ಕ್ರಿಶ್ಚಿಯನ್ನರ ಹತ್ಯೆಯನ್ನು ನಿಲ್ಲಿಸದಿದ್ದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಈ ಹಿಂದೆಯೇ ಎಚ್ಚರಿಕೆ ನೀಡಿದ್ದೆ" ಎಂದು ಟ್ರಂಪ್ ವಿವರಿಸಿದ್ದಾರೆ.
ಯುದ್ಧ ಇಲಾಖೆ ಅಸಂಖ್ಯಾತ ನಿಖರ ದಾಳಿಗಳನ್ನು ನಡೆಸಿದೆ. ಕೇವಲ ಅಮೆರಿಕಕ್ಕೆ ಮಾತ್ರ ಅದನ್ನು ಮಾಡುವ ಸಾಮರ್ಥ್ಯ ಇದೆ ಎಂದು ಹೇಳಿಕೊಂಡಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿ ಉಗ್ರರು ಬೆಳೆಯಲು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.
"ನಮ್ಮ ಸೇನೆಯನ್ನು ದೇವರು ಆಶೀರ್ವದಿಸಲಿ. ಎಲ್ಲರಿಗೂ ಕ್ರಿಸ್ಮಸ್ ಶುಭಾಶಯಗಳು. ಕ್ರಿಶ್ಚಿಯನ್ನರ ಹತ್ಯೆ ನಿಲ್ಲದಿದ್ದರೆ ಇನ್ನಷ್ಟು ಇಂಥ ದಾಳಿಗಳು ನಡೆಯಲಿವೆ" ಎಂದು ಎಚ್ಚರಿಸಿದ್ದಾರೆ.







