ಇರಾನ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರ ಬಳಸಲು ಟ್ರಂಪ್ ಯೋಜನೆ: ಮಾಜಿ ಸಂಸದೆ ಆರೋಪ

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಆ.17: ಟ್ರಂಪ್ ಆಡಳಿತವು ಉನ್ನತ ಮಟ್ಟದ ಕಾರ್ಯತಂತ್ರದ ಸಭೆಗಳಲ್ಲಿ ಇರಾನ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಸಾಧ್ಯತೆಯ ಕುರಿತು ಚರ್ಚಿಸುತ್ತಿದೆ ಎಂದು ಅಮೆರಿಕದ ಮಾಜಿ ಸಂಸದೆ ಮಾರ್ಜೋರಿ ಟೇಲರ್ ಗ್ರೀನ್ ಆರೋಪಿಸಿದ್ದಾರೆ. ಆದರೆ ತಮ್ಮ ಈ ಆರೋಪಕ್ಕೆ ಪುರಾವೆಯಾಗಿ ಅವರು ಯಾವುದೇ ಆಧಾರವನ್ನು ಒದಗಿಸಿಲ್ಲ.
`ಅವರು ಕಾರ್ಯತಂತ್ರದ ಸಭೆಗಳಲ್ಲಿ ಇರಾನ್ ಮೇಲೆ ಪರಮಾಣು ಶಸ್ತ್ರಾಸ್ತ್ರ್ರಗಳನ್ನು ಬಳಸುವ ಬಗ್ಗೆ ಚರ್ಚಿಸುತ್ತಿದ್ದಾರೆ. ಇದು ನಿಜ. ನಾನು ಊಹಿಸಿ ಹೇಳುತ್ತಿಲ್ಲ, ನನಗೆ ತಿಳಿದಿದೆ' ಎಂದು ಗ್ರೀನ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇರಾನ್ನಲ್ಲಿ ಅಮೆರಿಕದ ಮಿಲಿಟರಿ ಹಸ್ತಕ್ಷೇಪವನ್ನು ಹಿಂದೆ ಕೂಡ ಟೀಕಿಸಿದ್ದ ಗ್ರೀನ್, ಪರಮಾಣು ಶಸ್ತ್ರಾಸ್ತ್ರಗಳ ಯಾವುದೇ ಬಳಕೆಯು ವ್ಯಾಪಕ ಜಾಗತಿಕ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ವಿರೋಧಿಸುವಂತೆ ಮತ್ತು ಯುದ್ಧವನ್ನು ಕೊನೆಗೊಳಿಸುವಂತೆ ಅವರು ಅಮೆರಿಕನ್ನರಿಗೆ ಕರೆ ನೀಡಿದ್ದಾರೆ.




