ಭಾರತ-ಪಾಕಿಸ್ತಾನ ಶಾಂತಿ ಒಪ್ಪಂದ ಏರ್ಪಡಿಸುವಲ್ಲಿ ಟ್ರಂಪ್ ಮಹತ್ವದ ಪಾತ್ರ : ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್

ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ | Photo Credit : AP , PTI
ಸಿಂಗಾಪುರ,ಮೇ 30: ಕಳೆದ ವರ್ಷ ಪರಸ್ಪರ ಸಂಘರ್ಷಕ್ಕಿಳಿದಿದ್ದ ಭಾರತ ಹಾಗೂ ಪಾಕಿಸ್ತಾನ ನಡುವೆ ಶಾಂತಿ ಒಪ್ಪಂದವನ್ನು ಏರ್ಪಡಿಸುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಮುಖ ಪಾತ್ರ ವಹಿಸಿದ್ದರೆಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ತಿಳಿಸಿದ್ದಾರೆ.
ಸಿಂಗಾಪುರದಲ್ಲಿ ಶನಿವಾರ ನಡೆದ ಭದ್ರತಾ ಶೃಂಗಸಭೆ ‘ಶಾಂಘ್ರಿ ಲಾ ಡೈಲಾಗ್’ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಎಡು ಅಣ್ವಸ್ತ್ರ ಶಕ್ತ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸುವಲ್ಲಿ ಟ್ರಂಪ್ ಅವರ ರಾಜತಾಂತ್ರಿಕ ಮಧ್ಯಪ್ರವೇಶ ಅಗಾಧವಾದ ಯಶಸ್ಸನ್ನು ಕಂಡಿತೆಂದು ಅವರು ಹೇಳಿದ್ದಾರೆ. ಶೃಂಗಸಭೆಯಲ್ಲಿ ಅರು ಇಂಡೋ-ಪೆಸಿಫಿಕ್ ರಾಷ್ಟ್ರಗಳ ಕುರಿತಾದ ನೂತನ ಕಾರ್ಯತಂತ್ರದ ಬಗ್ಗೆಯೂ ವಿವರಿಸಿದರು.
ಕಳೆದ ವರ್ಷ ಜಮ್ಮಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರದಾಳಿಯಲ್ಲಿ 26 ಮಂದಿ ಮೃತಪಟ್ಟ ಘಟನೆಯ ಬಳಿಕ ಎರಡೂ ರಾಷ್ಟ್ರಗಳ ನಡುವೆ ಸಂಘರ್ಷಾವಸ್ಥೆ ತಲೆದೋರಿತ್ತು. ಭಾರತವು ‘ಅಪರೇಶನ್ ಸಿಂಧೂರ್’ ಮೂಲಕ ಪಾಕ್ನಲ್ಲಿರುವ ಭಯೋತ್ಪಾದಕರ ನೆಲೆ ಮೇಲೆ ದಾಳಿ ನಡೆಸಿತ್ತು. ಆನಂತರ ಭಾರತ ಹಾಗೂ ಪಾಕ್ ನಡುವೆ ನಾಲ್ಕು ದಿನಗಳ ಕಾಲ ಸಂಘರ್ಷ ಸ್ಥಿತಿ ಉಂಟಾಗಿತ್ತು. ಈ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಧ್ಯಪ್ರವೇಶಿಸಿ ಎರಡೂ ದೇಶಗಳ ನಡುವೆ ಕದನವಿರಾಮ ವೇರ್ಪಡುವಂತೆ ಮಾಡಿದರೆಂದು ಅಮೆರಿಕ ಹೇಳಿಕೊಳ್ಳುತ್ತಾ ಬಂದಿದೆ. ಆದರೆ, ಭಾರತವು ಈ ವಿಚಾರವಾಗಿ ಯಾವುದೇ ತೃತೀಯ ದೇಶ ಮಧ್ಯಸ್ಥಿಕೆ ಅಥವಾ ಹಸ್ತಕ್ಷೇಪ ನಡೆಸಿಲ್ಲವೆಂದು ಪ್ರತಿಪಾದಿಸಿದೆ.






