ಭಾರತದ ಮತದಾರರ ಗುರುತಿನ ಚೀಟಿ ವ್ಯವಸ್ಥೆಯನ್ನು ಶ್ಲಾಘಿಸಿದ ಟ್ರಂಪ್; ‘ಸೇವ್ ಅಮೆರಿಕ ಕಾಯ್ದೆ’ ಜಾರಿಗೆ ಕರೆ

Photo: x.com/IndianExpress
ವಾಷಿಂಗ್ಟನ್ : ಭಾರತದ ಮತದಾರರ ಗುರುತಿನ ಚೀಟಿಯನ್ನು ಶ್ಲಾಘಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪೌರತ್ವದ ಪುರಾವೆ ಮತ್ತು ಮತದಾರರ ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸುವ ಸೇವ್ ಅಮೆರಿಕ ಕಾಯ್ದೆಯನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಟ್ರೂತ್ ಸೋಷಿಯಲ್ ಪೋಸ್ಟ್ನಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರೊಂದಿಗಿನ ಇತ್ತೀಚಿನ ಸಂಭಾಷಣೆಯನ್ನು ಉಲ್ಲೇಖಿಸಿರುವ ಟ್ರಂಪ್, ಭಾರತದಲ್ಲಿ ಮತದಾರರು ಫೋಟೋ ಗುರುತಿನ ಚೀಟಿ ಬಳಸುವ ವ್ಯವಸ್ಥೆಯನ್ನು ಪ್ರಸ್ತಾಪಿಸಿದ್ದಾರೆ.
"ಈ ತಿಂಗಳ ಆರಂಭದಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನಮ್ಮ ಆಡಳಿತವನ್ನು ಪ್ರಶ್ನಿಸುತ್ತಾ, 'ಮಾನ್ಯ ಫೋಟೋ ಗುರುತಿನ ಚೀಟಿ ಇಲ್ಲದೆ ಅಮೆರಿಕದಲ್ಲಿ ಚುನಾವಣೆಗಳನ್ನು ಹೇಗೆ ನಡೆಸುತ್ತೀರಿ?' ಎಂದು ಕೇಳಿದ್ದರು" ಎಂದು ಟ್ರಂಪ್ ತಿಳಿಸಿದ್ದಾರೆ.
ಭಾರತದ ಇತ್ತೀಚಿನ ಚುನಾವಣೆಯನ್ನು ಉಲ್ಲೇಖಿಸಿರುವ ಟ್ರಂಪ್, 64.6 ಕೋಟಿ (646 ಮಿಲಿಯನ್) ಮತದಾರರು ಚುನಾವಣೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದ್ದಾರೆ. ಅವರ ಪ್ರಕಾರ, ಈ ಚುನಾವಣೆಯಲ್ಲಿ ಶೇಕಡಾ 1ಕ್ಕಿಂತ ಕಡಿಮೆ ಮಂದಿ ಅಂಚೆ ಮೂಲಕ ಮತ ಚಲಾಯಿಸಿದ್ದು, ಪ್ರತಿಯೊಬ್ಬ ಮತದಾರರೂ ಮಾನ್ಯ ಫೋಟೋ ಗುರುತಿನ ದಾಖಲೆಯನ್ನು ಹೊಂದಿರುವುದು ಕಡ್ಡಾಯವಾಗಿತ್ತು.
"ನಾವು ಈಗಲೇ 'ದಿ ಸೇವ್ ಅಮೆರಿಕ ಕಾಯ್ದೆ'ಯನ್ನು ಅಂಗೀಕರಿಸುವ ಅಗತ್ಯವಿದೆ" ಎಂದು ಅಮೆರಿಕ ಕಾಂಗ್ರೆಸ್ (ಸಂಸತ್ತು)ಗೆ ಮತ್ತೊಮ್ಮೆ ಕರೆ ನೀಡಿದ್ದಾರೆ.
ಶ್ವೇತಭವನದ ಪ್ರಕಾರ, ಪ್ರಸ್ತಾಪಿತ ಕಾನೂನು ಜಾರಿಯಾದರೆ ಅಮೆರಿಕದ ಪ್ರಜೆಗಳು ಮಾತ್ರ ಫೆಡರಲ್ ಚುನಾವಣೆಗಳಲ್ಲಿ ಮತ ಚಲಾಯಿಸಲು ಅರ್ಹರಾಗುತ್ತಾರೆ. ಈ ಮಸೂದೆಯನ್ನು ಶ್ವೇತಭವನವು ಸಾಮಾನ್ಯ ಜ್ಞಾನ ಆಧಾರಿತ ಹಾಗೂ ಉಭಯಪಕ್ಷೀಯ ಮಸೂದೆ ಎಂದು ಬಣ್ಣಿಸಿದೆ.
ಸುದ್ದಿ ಸಂಸ್ಥೆ ಎಎನ್ಐ ವರದಿ ಪ್ರಕಾರ, ಈ ಕಾಯ್ದೆಯಡಿ ಫೆಡರಲ್ ಚುನಾವಣೆಗಳಿಗೆ ಮತದಾರರಾಗಿ ನೋಂದಾಯಿಸಿಕೊಳ್ಳುವಾಗ ಮಾನ್ಯ ಗುರುತಿನ ಚೀಟಿ ಹಾಗೂ ಅಮೆರಿಕದ ಪೌರತ್ವದ ಪುರಾವೆ ಸಲ್ಲಿಸುವುದು ಕಡ್ಡಾಯವಾಗಲಿದೆ.
ಅಲ್ಲದೆ, ಅನಾರೋಗ್ಯ, ಅಂಗವೈಕಲ್ಯ, ಸೇನಾ ಸೇವೆ ಹಾಗೂ ಪ್ರಯಾಣ ಸೇರಿದಂತೆ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಅಂಚೆ ಮತದಾನಕ್ಕೆ ಅವಕಾಶ ನೀಡುವಂತೆ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.






