“ನಾನು ಕೋಪಗೊಂಡಿದ್ದೇನೆ”: ಪುಟಿನ್ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂಬ ರಶ್ಯಾದ ಆರೋಪಕ್ಕೆ ಟ್ರಂಪ್ ಪ್ರತಿಕ್ರಿಯೆ

Photo| indiatoday
ಹೊಸದಿಲ್ಲಿ: ಉಕ್ರೇನ್ ಡ್ರೋನ್ಗಳು ನನ್ನ ನಿವಾಸವನ್ನು ಗುರಿಯಾಗಿಸಿಕೊಂಡಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ರಶ್ಯ ಅಧ್ಯಕ್ಷರ ಆರೋಪವನ್ನು ಉಕ್ರೇನ್ ನಿರಾಕರಿಸಿದೆ.
ಫ್ಲೋರಿಡಾದ ಮಾರ್-ಎ-ಲಾಗೊ ರೆಸಾರ್ಟ್ನಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗಿನ ಸಭೆಗೆ ಮುಂಚಿತವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಪುಟಿನ್ ಪೋನ್ ಕರೆ ಮಾಡಿದ ಸಂದರ್ಭದಲ್ಲಿ ಈ ಬಗ್ಗೆ ತಿಳಿಸಿದ್ದಾರೆ ಎಂದು ಹೇಳಿದರು.
“ಯಾರು ನನಗೆ ಇದರ ಬಗ್ಗೆ ಹೇಳಿದರು ಗೊತ್ತೇ? ಪುಟಿನ್, ಬೆಳಿಗ್ಗೆ ಬೇಗನೇ ಫೋನ್ ಮಾಡಿ, ನನ್ನ ನಿವಾಸದ ಮೇಲೆ ದಾಳಿ ನಡೆದಿದೆ ಎಂದು ಹೇಳಿದರು. ಇದು ಒಳ್ಳೆಯದಲ್ಲ. ನಾನು ತುಂಬಾ ಕೋಪಗೊಂಡಿದ್ದೇನೆ,” ಎಂದು ಟ್ರಂಪ್ ಡ್ರೋನ್ ದಾಳಿ ಬಗ್ಗೆ ಹೇಳಿದರು.
ಆದರೆ ಅದೇ ಸಮಯದಲ್ಲಿ ಈ ಆರೋಪ ಸುಳ್ಳಾಗಿರಬಹುದು ಎಂಬುದನ್ನೂ ಅವರು ಹೇಳಿದರು. ದಾಳಿ ನಡೆದೇ ಇಲ್ಲದಿರುವ ಸಾಧ್ಯತೆ ಕೂಡ ಇದೆ. ದಾಳಿಗೆ ಇದು ಸರಿಯಾದ ಸಮಯವಲ್ಲ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಸರಕಾರಿ ನಿವಾಸವನ್ನು ಗುರಿಯಾಗಿಸಿ ಉಕ್ರೇನ್ ಡ್ರೋನ್ ದಾಳಿ ನಡೆಸಲು ಯತ್ನಿಸಿದೆ ಎಂದು ರಶ್ಯಾ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಪ್ರತೀಕಾರದ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ರಶ್ಯಾ ನೀಡಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ, ರಶ್ಯಾದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಕೈವ್ ನಲ್ಲಿರುವ ಸರಕಾರಿ ಕಟ್ಟಡಗಳ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಮಾಸ್ಕೋ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದ್ದಾರೆ.







