ಉಕ್ರೇನ್ ನಲ್ಲಿ ಕದನ ವಿರಾಮ ತಳ್ಳಿಹಾಕಿದ ಟ್ರಂಪ್

ವ್ಲಾದಿಮಿರ್ ಪುಟಿನ್ ಮತ್ತು ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್, ಆ.16: ಅಲಾಸ್ಕಾದಲ್ಲಿ ಶುಕ್ರವಾರ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗಿನ ಸಭೆಯ ಬಳಿಕ ತಡರಾತ್ರಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯೊಂದಿಗೆ ದೂರವಾಣಿಯಲ್ಲಿ ನಡೆಸಿದ ಮಾತುಕತೆ ಉತ್ತಮವಾಗಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ಉಕ್ರೇನ್ ನಲ್ಲಿ ತಕ್ಷಣದ ಕದನ ವಿರಾಮದ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.
ಕದನ ವಿರಾಮದ ಬದಲು ನೇರವಾಗಿ ಶಾಂತಿ ಒಪ್ಪಂದಕ್ಕೆ ತಾನು ಆದ್ಯತೆ ನೀಡುವುದಾಗಿ ಟ್ರಂಪ್ ಹೇಳಿದ್ದಾರೆ. ರಶ್ಯ ಮತ್ತು ಉಕ್ರೇನ್ ನಡುವಿನ ಭಯಾನಕ ಯುದ್ಧವನ್ನು ಅಂತ್ಯಗೊಳಿಸುವ ಉತ್ತಮ ವಿಧಾನವೆಂದರೆ ನೇರವಾಗಿ ಶಾಂತಿ ಒಪ್ಪಂದಕ್ಕೆ ಹೋಗುವುದು ಎಂಬುದನ್ನು ಎಲ್ಲರೂ ದೃಢಪಡಿಸಿದ್ದಾರೆ. ಕದನ ವಿರಾಮ ಒಪ್ಪಂದ ಯಾವಾಗ ಬೇಕಾದರೂ ಉಲ್ಲಂಘನೆಯಾಗಬಹುದು, ಆದರೆ ಶಾಂತಿ ಒಪ್ಪಂದ ಶಾಶ್ವತವಾಗಿರುತ್ತದೆ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸೋಮವಾರ ವಾಷಿಂಗ್ಟನ್ ಗೆ ಆಗಮಿಸಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ ಶೀಘ್ರವೇ ಪುಟಿನ್ರನ್ನು ಒಳಗೊಂಡ ತ್ರಿಪಕ್ಷೀಯ ಸಭೆ ನಡೆಯಲಿದೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಪುಟಿನ್ ಜೊತೆಗಿನ ಸಭೆಯಲ್ಲಿ ಒಪ್ಪಂದಕ್ಕೆ ಹತ್ತಿರ ಬಂದಿದ್ದೇವೆ. ಅನೇಕ ಸಂಗತಿಗಳು ಸಂಭವಿಸಬಹುದು. ಅಧ್ಯಕ್ಷ ಪುಟಿನ್ ಸಮಸ್ಯೆಯನ್ನು ಪರಿಹರಿಸಲು ಬಯಸುತ್ತಾರೆ ಎಂದು ಭಾವಿಸುತ್ತೇನೆ. ಇದೀಗ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ನಡುವೆ ಸಭೆ ಏರ್ಪಡಿಸಲಾಗುವುದು. ಸಭೆಯ ಯಶಸ್ಸು ಝೆಲೆನ್ಸ್ಕಿಯ ನಿರ್ವಹಣೆಯನ್ನು ಅವಲಂಬಿಸಿದೆ. ಯುರೋಪಿಯನ್ ಯೂನಿಯನ್ ಮುಖಂಡರೂ ಸ್ವಲ್ಪ ಮಟ್ಟಿನ ಪಾತ್ರ ವಹಿಸಬಹುದು. ಉಕ್ರೇನ್ ಶಾಂತಿ ಒಪ್ಪಂದಕ್ಕೆ ಸಮ್ಮತಿಸಬೇಕು. ಒಪ್ಪಂದ ಮಾಡಿಕೊಳ್ಳಿ ಎಂಬ ಸಂದೇಶವನ್ನು ಝೆಲೆನ್ಸ್ಕಿಗೆ ನೀಡುವುದಾಗಿ ಟ್ರಂಪ್ ಹೇಳಿದ್ದಾರೆ.







