ಭಾರತ-ಪಾಕಿಸ್ತಾನ ಯುದ್ಧ ಸೇರಿದಂತೆ ನಾನು ಏಳು ಯುದ್ಧಗಳನ್ನು ನಿಲ್ಲಿಸಿದ್ದೇನೆ: ವಿಶ್ವ ಸಂಸ್ಥೆಯಲ್ಲಿ ಡೊನಾಲ್ಡ್ ಟ್ರಂಪ್ ಪುನರುಚ್ಚಾರ

ಡೊನಾಲ್ಡ್ ಟ್ರಂಪ್ | PC : PTI
ನ್ಯೂಯಾರ್ಕ್: ಕೇವಲ ಏಳು ತಿಂಗಳ ಅವಧಿಯಲ್ಲಿ ನಾನು, ಅಂತ್ಯಗೊಳಿಸಲು ಸಾಧ್ಯವಿಲ್ಲದಿದ್ದ ಏಳು ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದು ಅಮೆರಿಕ ಅಧ್ಯಂಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
80ನೇ ವಿಶ್ವ ಸಂಸ್ಥೆಯ ಮಹಾಧಿವೇಶನವನ್ನುದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ನಾನು ಭಾರತ ಮತ್ತು ಪಾಕಿಸ್ತಾನ, ಇಸ್ರೇಲ್ ಮತ್ತು ಇರಾನ್, ರುವಾಂಡ ಮತ್ತು ಕಾಂಗೊ, ಥಾಯ್ಲೆಂಡ್ ಮತ್ತು ಕಾಂಬೋಡಿಯಾ, ಅರ್ಮೇನಿಯಾ ಮತ್ತು ಆಝರ್ ಬೈಜಾನ್, ಈಜಿಪ್ಟ್ ಮತ್ತು ಇಥಿಯೋಪಿಯಾ ಹಾಗೂ ಸೆರ್ಬಿಯಾ ಮತ್ತು ಕೊಸೊವೊ ರಾಷ್ಟ್ರಗಳ ನಡುವಿನ ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.
“ಅವನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ಕೆಲವು ಯುದ್ಧಗಳು 31 ವರ್ಷದಿಂದ ನಡೆಯುತ್ತಿದ್ದವು. ಒಂದು ಯುದ್ಧ 36 ವರ್ಷಗಳಿಂದ ನಡೆಯುತ್ತಿತ್ತು. ನಾನು ಏಳು ಯುದ್ಧಗಳನ್ನು ನಿಲ್ಲಿಸಿದೆ ಹಾಗೂ ಈ ಎಲ್ಲ ಪ್ರಕರಣಗಳಲ್ಲಿ ಸಾವಿರಾರು ಮಂದಿ ಹತರಾಗಿದ್ದರು. ಬೇರಾವ ಅಮೆರಿಕ ಅಧ್ಯಕ್ಷ ಅಥವಾ ನಾಯಕರೂ ಕೂಡಾ ಇದಕ್ಕೆ ಸರಿಸಾಟಿಯಾಗುವಂತಹ ಕೆಲಸ ಮಾಡಿರಲಿಲ್ಲ” ಎಂದು ಅವರು ಪ್ರತಿಪಾದಿಸಿದ್ದಾರೆ.
ನಂತರ, ವಿಶ್ವಸಂಸ್ಥೆಯನ್ನು ಟೀಕಿಸಿದ ಅವರು, ವಿಶ್ವ ಸಂಸ್ಥೆ ಈ ಯುದ್ಧಗಳು ಪರಿಹಾರವಾಗಲು ನೆರವು ನೀಡುವ ಪ್ರಯತ್ನವನ್ನೂ ಮಾಡಲಿಲ್ಲ. ಅದು ತನ್ನ ಸಾಮರ್ಥ್ಯಕ್ಕೆ ತಕ್ಕಷ್ಟು ಕೆಲಸವನ್ನೂ ಮಾಡಲಿಲ್ಲ. ಅದರದ್ದು ಕೇವಲ ಖಾಲಿ ಮಾತುಗಳು ಮಾತ್ರ. ಖಾಲಿ ಮಾತುಗಳು ಯುದ್ಧಗಳನ್ನು ಪರಿಹರಿಸಲು ಸಾಧ್ಯವಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.
ಆದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಾನು ನಿಲ್ಲಿಸಿದೆ ಎಂಬ ಡೊನಾಲ್ಡ್ ಟ್ರಂಪ್ ಪ್ರತಿಪಾದನೆಯನ್ನು ಅಲ್ಲಗಳೆದಿದ್ದ ಭಾರತ, ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮವನ್ನು ಭಾರತ ಮತ್ತು ಪಾಕಿಸ್ತಾನ ಸೇನಾಪಡೆಗಳ ನಡುವಿನ ಮಾತುಕತೆಯ ಮೂಲಕ ಸಾಧಿಸಲಾಯಿತೇ ಹೊರತು, ಅಮೆರಿಕದ ಮಧ್ಯಸ್ಥಿಕೆಯಿಂದಲ್ಲ ಎಂದು ಸ್ಪಷ್ಟಪಡಿಸಿತ್ತು.







