ಇರಾನ್ ಮೇಲೆ ಮತ್ತಷ್ಟು ದಾಳಿ ನಡೆಸದಂತೆ ಗಲ್ಫ್ ಮಿತ್ರರಾಷ್ಟ್ರಗಳಿಂದ ಮನವಿ: ಡೊನಾಲ್ಡ್ ಟ್ರಂಪ್ ಹೇಳಿಕೆ

ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್: ಇರಾನ್ ವಿರುದ್ಧ ಮತ್ತಷ್ಟು ದಾಳಿ ನಡೆಸದಂತೆ ಸೌದಿ ಅರೇಬಿಯಾ, ಖತಾರ್ ಹಾಗೂ ಇತರೆ ಗಲ್ಫ್ ರಾಷ್ಟ್ರಗಳು ತಮ್ಮನ್ನು ಕೋರಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ವೈಟ್ ಹೌಸ್ನಲ್ಲಿ ಟಿವಿ ನಿರೂಪಕ ಸ್ಟೀಫನ್ ಎ ಸ್ಮಿತ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ತಕ್ಷಣವೇ ಯುದ್ಧವನ್ನು ಕೊನೆಗೊಳಿಸಬಹುದು. ಆದರೆ, ಪ್ರಾದೇಶಿಕ ಮಿತ್ರ ರಾಷ್ಟ್ರಗಳ ಮನವಿ ಮೇರೆಗೆ, ಆರ್ಥಿಕ ಹಾಗೂ ಮಿಲಿಟರಿ ಒತ್ತಡವನ್ನು ಮುಂದುವರಿಸಿದ್ದಾಗಿ ಹೇಳಿದ್ದಾರೆ.
ಸದ್ಯದ ಪರಿಸ್ಥಿತಿಯನ್ನು ಸ್ವಲ್ಪ ಕಾಲ ಹೀಗೇ ಮುಂದುವರಿಸಿ ಎಂದು ಸೌದಿ ಅರೇಬಿಯಾ ಕೇಳಿದೆ. ಖತಾರ್, ಕುವೈತ್, ಸಂಯುಕ್ತ ಅರಬ್ ಸಂಸ್ಥಾನ ಹಾಗೂ ಬಹ್ರೇನ್ ಕೂಡ ಈ ವಿಧಾನವನ್ನೇ ಮುಂದುವರಿಸಲು ಬಯಸುತ್ತಿವೆ. ನಾನು ಇದನ್ನು ಒಪ್ಪುತ್ತೇನೆಯೇ ಎಂಬುದು ಖಚಿತವಿಲ್ಲ ಎಂದಿದ್ದಾರೆ.
ಗಲ್ಫ್ ಮಿತ್ರರಾಷ್ಟ್ರಗಳಿಂದ ಈ ಮನವಿ ಇಲ್ಲದಿದ್ದರೂ, ನೀವು ದಾಳಿಗಳನ್ನು ನಡೆಸುತ್ತೀರಾ ಎಂದು ಪ್ರಶ್ನಿಸಿದಾಗ, ಹೌದು, ನಾನು ನಡೆಸುತ್ತಿದ್ದೆ ಎಂದು ಟ್ರಂಪ್ ಉತ್ತರಿಸಿದ್ದಾರೆ.
ಅಮೆರಿಕವು ಇರಾನ್ನ ಇಂಧನ ಮೂಲಸೌಕರ್ಯ, ಸೇತುವೆಗಳು ಹಾಗೂ ಉತ್ಪಾದನಾ ಸೌಲಭ್ಯಗಳ ಮೇಲೆ ಯಾವುದೇ ದಾಳಿ ಮಾಡದೆ, ಬಹುತೇಕ ಹಾಗೆಯೇ ಉಳಿಸಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಒಂದೇ ದಿನದಲ್ಲಿ ಇರಾನ್ನ ಇಂಧನ ಶಕ್ತಿ ಇಲ್ಲವಾಗುತ್ತದೆ. ಅವರ ಸೇತುವೆಗಳು ನಾಶವಾಗುತ್ತವೆ. ಜೊತೆಗೆ ಉತ್ಪಾದನಾ ಸಾಮರ್ಥ್ಯವು ಇಲ್ಲವಾಗುತ್ತದೆ. ನನಗೆ ಕೇವಲ ಮೂರು ದಿನಗಳು ಸಾಕು ಎಂದು ಹೇಳಿದ್ದಾರೆ.
ಯುದ್ಧದಿಂದಾಗಿ ಪೆಟ್ರೋಲ್ ಬೆಲೆ ಏರಿಕೆಯಾಯಿತು. ಇದು ಮಧ್ಯಂತರ ಚುನಾವಣೆಗಳಲ್ಲಿ ರಿಪಬ್ಲಿಕನ್ನರ ಸೋಲಿಗೆ ಕಾರಣವಾಯಿತು ಎಂದು ಟ್ರಂಪ್ ಒಪ್ಪಿಕೊಂಡಿದ್ದಾರೆ. ಆದರೆ, ಇರಾನ್ ಮೇಲೆ ದಾಳಿ ಮಾಡುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.






