ವೆಸ್ಟ್ ಬ್ಯಾಂಕ್ ಅನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಇಸ್ರೇಲ್ಗೆ ಅನುಮತಿಸುವುದಿಲ್ಲ : ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ | PTI
ವಾಷಿಂಗ್ಟನ್ : ಇಸ್ರೇಲ್ ಆಕ್ರಮಿತ ವೆಸ್ಟ್ ಬ್ಯಾಂಕ್ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ (ತಮ್ಮ ದೇಶಕ್ಕೆ ಸೇರಿಸಿಕೊಳುವುದಕ್ಕೆ) ಇಸ್ರೇಲ್ಗೆ ಅನುಮತಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ನ್ಯೂಯಾರ್ಕ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಲು ನೆತನ್ಯಾಹು ಅಮೆರಿಕಕ್ಕೆ ಆಗಮಿಸುವ ಮುನ್ನವೇ ಟ್ರಂಪ್ ಈ ಹೇಳಿಕೆ ನೀಡಿದ್ದರು. ಇದು, ಆ ಪ್ರದೇಶವನ್ನು ಸೇರ್ಪಡೆಗೊಳಿಸುವ ಆಕಾಂಕ್ಷೆಯನ್ನು ಹೊಂದಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಇಸ್ರೇಲ್ ಸಚಿವರ ಅಭಿಪ್ರಾಯಕ್ಕೆ ವಿರುದ್ಧವಾಗಿದೆ.
ನಾನು ಇಸ್ರೇಲ್ಗೆ ವೆಸ್ಟ್ ಬ್ಯಾಂಕ್ ಪ್ರದೇಶವನ್ನು ಸೇರ್ಪಡೆಗೆ ಅವಕಾಶ ಕೊಡಲ್ಲ. ಅದು ಆಗುವುದೂ ಇಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇಸ್ರೇಲ್ ಪ್ರಧಾನಿ ನೆತನ್ಯಾಹುವರ ಜೊತೆ ಈ ವಿಷಯದ ಬಗ್ಗೆ ಮಾತನಾಡಿದ್ದೀರಾ ಎಂಬ ಪ್ರಶ್ನೆಗೆ ಟ್ರಂಪ್ ಸ್ಪಷ್ಟ ಉತ್ತರ ಕೊಡದೇ, ಅವರೊಂದಿಗೆ ಮಾತನಾಡಿದರೂ ಅಥವಾ ಮಾತನಾಡದಿದ್ದರೂ ಅದಕ್ಕೆ ನಾನು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.
ನಾನು ಮಾತನಾಡಿದ್ದೇನೋ ಇಲ್ಲವೋ ಅದು ಬೇರೆ ವಿಷಯ. ಆದರೆ, ಇಸ್ರೇಲ್ಗೆ ವೆಸ್ಟ್ ಬ್ಯಾಂಕ್ ಅನ್ನು ಸೇರಿಸಿಕೊಳ್ಳಲು ಅವಕಾಶವಿಲ್ಲ. ಸಾಕಾಗಿದೆ, ಈಗ ನಿಲ್ಲಿಸುವ ಸಮಯ ಬಂದಿದೆ ಸರಿ ಅಲ್ವ? ಎಂದು ಟ್ರಂಪ್ ಹೇಳಿದ್ದಾರೆ.
ಆಕ್ರಮಿತ ವೆಸ್ಟ್ಬ್ಯಾಂಕ್ ಸಂಭಾವ್ಯ ಸ್ವಾಧೀನವನ್ನು ತಡೆಯಲು ಅವರು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದರ ಕುರಿತು ಟ್ರಂಪ್ ವಿವರಗಳನ್ನು ನೀಡಲಿಲ್ಲ. ಇದರಿಂದ ಟ್ರಂಪ್ ತನ್ನ ಮನಸ್ಸನ್ನು ಬದಲಾಯಿಸುತ್ತಾರೆಯೇ ಎಂದು ವಿಶ್ಲೇಷಕರು ಪ್ರಶ್ನಿಸಿದ್ದಾರೆ.
ಅಲ್ ಜಝೀರಾ ಜೊತೆ ಮಾತನಾಡಿದ ಖತರ್ ಮೂಲದ ಸಂಘರ್ಷ ಮತ್ತು ಮಾನವೀಯ ಅಧ್ಯಯನ ಕೇಂದ್ರದ ವಿಶ್ಲೇಷಕ ಮೌಯಿನ್ ರಬ್ಬಾನಿ, ಟ್ರಂಪ್ ಅವರ ಹೇಳಿಕೆಯು ಸಕಾರಾತ್ಮಕ ಬೆಳವಣಿಗೆಯಾಗಿದೆ. ಆದರೆ, ಅಮೆರಿಕ ಅಧ್ಯಕ್ಷರು ತನ್ನ ಮಾತನ್ನು ಅನುಸರಿಸುತ್ತಾರೆಯೇ ಎಂದು ಪ್ರಶ್ನಿಸಿದರು.
"ಇಸ್ರೇಲ್ ವೆಸ್ಟ್ ಬ್ಯಾಂಕ್ ಅನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಟ್ರಂಪ್ ಖಚಿತವಾಗಿ ಹೇಳುತ್ತಾರ? ಒಂದು ವೇಳೆ ಸ್ವಾಧೀನಪಡಿಸಿಕೊಳ್ಳಲು ಇಸ್ರೇಲ್ ಮುಂದಾದರೆ ಟ್ರಂಪ್ ಏನು ಮಾಡುತ್ತಾರೆ? ಅವರು ನಡೆಸುವ ಮತ್ತೊಂದು ಸಂಭಾಷಣೆಯಿಂದ ಅವರ ಮನಸ್ಸು ಬದಲಾಗಬಹುದೇ?” ಎಂದು ಮೌಯಿನ್ ರಬ್ಬಾನಿ ಪ್ರಶ್ನಿಸಿದ್ದಾರೆ.







