ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ನರು ಗೆದ್ದರೆ ಪ್ರತಿ ಅಮೆರಿಕನ್ ಗೆ 5,000 ಡಾಲರ್ ನೀಡಲಾಗುವುದು: ಟ್ರಂಪ್ ಘೋಷಣೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo credit: PTI)
ವಾಷಿಂಗ್ಟನ್: ನವೆಂಬರ್ ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷವು ಅಮೆರಿಕನ್ ಕಾಂಗ್ರೆಸ್ ನ (ಸಂಸತ್ತು) ಪ್ರತಿನಿಧಿಗಳ ಸಭೆ ಮತ್ತು ಸೆನೆಟ್ ನಲ್ಲಿ ಬಹುಮತ ಗಳಿಸಿದರೆ, ಪ್ರತಿ ವಯಸ್ಕ ಅಮೆರಿಕನ್ ಗೆ 5,000 ಡಾಲರ್ ನೀಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಟೆಕ್ಸಾಸ್ ನ ಡಲ್ಲಾಸ್ ನಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ನ್ಯಾಷನಲ್ ಕಮಿಟಿಯ ಮಧ್ಯಂತರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಚುನಾವಣಾ ಕಣದಲ್ಲಿ ತಾವೇ ಸ್ಪರ್ಧಿಸುತ್ತಿದ್ದೇನೆ ಎಂದು ಭಾವಿಸಿ ಮತ ಚಲಾಯಿಸುವಂತೆ ತಮ್ಮ ಬೆಂಬಲಿಗರಿಗೆ ಮನವಿ ಮಾಡಿದರು.
"ರಿಪಬ್ಲಿಕನ್ನರು ಗೆದ್ದರೆ, ನೀವು ನಮ್ಮೊಂದಿಗೆ ಗೆಲ್ಲುತ್ತೀರಿ ಮತ್ತು ನಿಮಗೆ 5,000 ಡಾಲರ್ ಸಿಗುತ್ತದೆ. ಇದನ್ನು ‘ಟ್ರಂಪ್ ಡಿವಿಡೆಂಡ್’ (ಟ್ರಂಪ್ ಲಾಭಾಂಶ) ಎಂದು ಕರೆಯಲಾಗುತ್ತದೆ" ಎಂದು ಟ್ರಂಪ್ ಹೇಳಿದರು.
ಆದರೆ, 1 ಟ್ರಿಲಿಯನ್ ಡಾಲರ್ ಅಧಿಕ ವೆಚ್ಚದ ಈ ಯೋಜನೆಗೆ ಹಣದ ಮೂಲವೇನು ಎಂಬುದನ್ನು ಟ್ರಂಪ್ ಸ್ಪಷ್ಟಪಡಿಸಲಿಲ್ಲ. "ನಮ್ಮ ದೇಶವು ಅಪಾರ ಪ್ರಮಾಣದ ಹಣ ಗಳಿಸುತ್ತಿದೆ" ಎಂದಷ್ಟೇ ಅವರು ಹೇಳಿದರು.
ಸಾರ್ವಜನಿಕ ಸಮೀಕ್ಷೆಗಳಲ್ಲಿ ರಿಪಬ್ಲಿಕನ್ನರು ಹಿನ್ನಡೆ ಅನುಭವಿಸುತ್ತಿರುವ ನಡುವೆಯೇ, ಈ ಭಾರಿ ಮೊತ್ತದ ಘೋಷಣೆಯ ಮೂಲಕ ಟ್ರಂಪ್ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಲೆ ಏರಿಕೆ ಮತ್ತು ಇರಾನ್ ವಿರುದ್ಧ ಟ್ರಂಪ್ ಆರಂಭಿಸಿದ ಯುದ್ಧದ ಬಗ್ಗೆ ಮತದಾರರ ಅಸಮಾಧಾನ ಹೆಚ್ಚುತ್ತಿರುವ ನಡುವೆ, ಅವರ ಜನಪ್ರಿಯತೆ ಶೇ.30ರ ಆಸುಪಾಸಿಗೆ ಕುಸಿದಿದೆ ಎಂದು ಬಹುತೇಕ ಚುನಾವಣಾಪೂರ್ವ ಸಮೀಕ್ಷೆಗಳು ತೋರಿಸಿವೆ.






