G7 ಶೃಂಗಸಭೆಯಿಂದ ಅಮೆರಿಕಕ್ಕೆ ಮರಳುವುದಕ್ಕೂ ಇಸ್ರೇಲ್-ಇರಾನ್ ನಡುವಿನ ಕದನ ವಿರಾಮಕ್ಕೂ ಯಾವುದೇ ಸಂಬಂಧವಿಲ್ಲ: ಟ್ರಂಪ್
ದೊಡ್ಡ ವಿಚಾರವವೊಂದು ನಡೆಯಲಿದೆ, ಅದೇನೆಂದು ಕಾಯುತ್ತಾ ಇರಿ ಎಂದ ಅಮೆರಿಕದ ಅಧ್ಯಕ್ಷ!

Photo credit: PTI
ವಾಷಿಂಗ್ಟನ್: ಕೆನಡಾದಲ್ಲಿ ನಡೆಯುತ್ತಿರುವ G7 ಶೃಂಗಸಭೆಯಿಂದ ತರಾತುರಿಯಲ್ಲಿ ಅಮೆರಿಕಕ್ಕೆ ಮರಳುವುದಕ್ಕೂ ಇಸ್ರೇಲ್ ಇರಾನ್ ನಡುವಿನ ಕದನ ವಿರಾಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ಕುರಿತು ಬಂದಿರುವ ವರದಿಗಳನ್ನು ನಿರಾಕರಿಸುವ ಅವರು ಯಾವ ಕಾರಣಕ್ಕೆ ಮರಳಿದ್ದೇನೆ ಎಂಬುದನ್ನು ತಿಳಿಯುವುದಕ್ಕೆ ಕಾಯುತ್ತಾ ಇರಿ ಎಂದು ಹೇಳಿದ್ದಾರೆ.
ಇಸ್ರೇಲ್ ಮತ್ತು ಇರಾನ್ ನಡುವೆ ಕದನ ವಿರಾಮಕ್ಕೆ ಕೆಲಸ ಮಾಡಲು G7 ಶೃಂಗಸಭೆಯಿಂದ ಮೊದಲೇ ಹೊರಟುಹೋದ ವರದಿಗಳನ್ನು ಅಮೆರಿಕ ಅಧ್ಯಕ್ಷರು ನಿರಾಕರಿಸಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಇಸ್ರೇಲ್ ಮತ್ತು ಇರಾನ್ ನಡುವಿನ ಕದನ ವಿರಾಮಕ್ಕೆ ಬೇಕಾದ ಸಿದ್ಧತೆಗಳಿಗಾಗಿ ಟ್ರಂಪ್ ಅಮೆರಿಕಕ್ಕೆ ಮರಳಿದ್ದಾರೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಇಸ್ರೇಲ್ ಮತ್ತು ಇರಾನ್ ನಡುವಿನ ಕದನ ವಿರಾಮಕ್ಕಾಗಿ ವಾಷಿಂಗ್ಟನ್ ಡಿಸಿಗೆ ಮರಳುತ್ತಿರುವುದಾಗಿ ತಪ್ಪಾಗಿ ಹೇಳಿಕೆ ನೀಡಿದ್ದಾರೆ. ಆದರೆ ನಾನು ಯಾವ ಕಾರಣಕ್ಕೆ ಹೋಗುತ್ತಿದ್ದೇನೆ ಎಂದು ಅವರಿಗೆ ತಿಳಿದಿಲ್ಲ. ನಾನು ಮರಳುತ್ತಿರುವುದಕ್ಕೂ ಕದನ ವಿರಾಮಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಒಂದು ದೊಡ್ಡ ವಿಚಾರಕ್ಕಾಗಿ ಮರಳುತ್ತಿದ್ದೇನೆ ಅದೇನೆಂದು ಕಾಯುತ್ತಾ ಇರಿ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇದಕ್ಕೂ ಮುಂಚೆ ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ರುಥ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ, "ಟೆಹರಾನ್ ನಿಂದ ಎಲ್ಲರೂ ಬೇಗನೆ ಸ್ಥಳಾಂತರವಾಗಬೇಕು" ಎಂದು ಎಚ್ಚರಿಕೆ ನೀಡಿರುವುದು, ಮತ್ತು ಪ್ರಸಕ್ತ ಅವರು "ಕಾಯುತ್ತಾ ಇರಿ" ಎಂದು ಹೇಳುತ್ತಿರುವುದು ನೋಡಿದರೆ ಮಧ್ಯ ಪ್ರಾಂತ್ಯದ ಉದ್ವಿಗ್ನ ಸ್ಥಿತಿಯಲ್ಲಿ ದೊಡ್ಡದೇನೋ ಸಂಭವಿಸುವಂತಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.







