ಇರಾನ್ ದಾಳಿ ಮಾಡಿದರೆ ಅಮೆರಿಕ ಪೂರ್ಣ ಸೇನಾಬಲದೊಂದಿಗೆ ಪ್ರತಿದಾಳಿ ನಡೆಸಲಿದೆ : ಡೊನಾಲ್ಡ್ ಟ್ರಂಪ್

ಇರಾನ್ ದಾಳಿ ಮಾಡಿದರೆ, ಅಮೆರಿಕ ಪೂರ್ಣ ಸೇನಾಬಲದೊಂದಿಗೆ ಪ್ರತಿದಾಳಿ ನಡೆಸಲಿದೆ : ಡೊನಾಲ್ಡ್ ಟ್ರಂಪ್
ಇಸ್ರೇಲ್ ನಡೆಸಿರುವ ದಾಳಿಯಲ್ಲಿ ನಮ್ಮ ಪಾತ್ರವಿಲ್ಲ ಎಂದ ಅಮೆರಿಕದ ಅಧ್ಯಕ್ಷ
ವಾಷಿಂಗ್ಟನ್ : ಇರಾನ್‌ನ ಮಿಲಿಟರಿ ಮತ್ತು ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿರುವ ದಾಳೆಯಲ್ಲಿ ನಮ್ಮ ಯಾವುದೇ ಪಾತ್ರವಿಲ್ಲ. ಹಾಗಾಗಿ ನಮ್ಮ ಮೇಲೆನಾದರೂ ಇರಾನ್ ದಾಳಿ ಮಾಡಿದರೆ ನಮ್ಮ ಮಿಲಿಟರಿ ಪೂರ್ಣ ಪ್ರಮಾಣದಲ್ಲಿ ಇರಾನ್ ಮೇಲೆ ಪ್ರತಿದಾಳಿ ನಡೆಸಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಶುಕ್ರವಾರ ಮುಂಜಾನೆ ಇರಾನಿನ ಪರಮಾಣು, ಮಿಲಿಟರಿ ಕೇಂದ್ರಗಳು, ಪ್ರಮುಖ ನಗರಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ. ಇರಾನ್‌ನ ಉನ್ನತ ಸೇನಾ ಕಮಾಂಡರ್‌ಗಳು ಮತ್ತು ಪರಮಾಣು ವಿಜ್ಞಾನಿಗಳು ಸೇರಿದಂತೆ ಕನಿಷ್ಠ 78 ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ನಡೆಸಿದ ದಾಳಿಯಲ್ಲಿ ಇಸ್ರೇಲ್‌ನಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ.
ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸುವ ಬಗ್ಗೆ ತನಗೆ ಪೂರ್ವಭಾವಿ ಮಾಹಿತಿಯಿತ್ತೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಮೊದಲು ಹೇಳಿದ್ದರು. ರವಿವಾರ ಟ್ರೂತ್ ಸೋಶಿಯಲ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಟ್ರಂಪ್, ʼಇರಾನ್ ಮೇಲಿನ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಇರಾನ್ ಯಾವುದೇ ರೂಪದಲ್ಲಿ ನಮ್ಮ ಮೇಲೆ ದಾಳಿ ಮಾಡಿದರೆ, ಯುಎಸ್ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಹಿಂದೆಂದೂ ನೋಡಿರದ ರೀತಿಯಲ್ಲಿ ಇರಾನ್ ಮೇಲೆರಗಲಿದೆʼ ಎಂದು ಹೇಳಿದ್ದಾರೆ.







