"ಯಾರೂ ಉದ್ದೇಶಪೂರ್ವಕವಾಗಿ ಮಾಡಿಲ್ಲ": ಇರಾನ್ ಬಾಲಕಿಯರ ಶಾಲೆ ಮೇಲಿನ ದಾಳಿ ಬಗ್ಗೆ ಟ್ರಂಪ್ ಪ್ರತಿಕ್ರಿಯೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್: 168 ಮಕ್ಕಳ ಪ್ರಾಣ ಹಾನಿಗೆ ಕಾರಣವಾದ ಇರಾನ್ನ ಬಾಲಕಿಯರ ಶಾಲೆಯೊಂದರ ಮೇಲೆ ನಡೆದ ಬಾಂಬ್ ದಾಳಿಯು ಉದ್ದೇಶಪೂರ್ವಕ ದಾಳಿಯಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಫ್ರಾನ್ಸ್ನಲ್ಲಿ ನಡೆದ ಜಿ7 ಶೃಂಗಸಭೆಯ ಕೊನೆಗೆ ಮಾತನಾಡಿದ ಟ್ರಂಪ್, ಸಂಘರ್ಷದ ಸಮಯದಲ್ಲಿ ಶಾಲೆಯನ್ನು ಉದ್ದೇಶಪೂರ್ವಕವಾಗಿ ಗುರಿಪಡಿಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
"ಶಾಲೆಯಲ್ಲಿ ಸಂಭವಿಸಿದ ಸ್ಫೋಟದ ಕುರಿತು ನಡೆಯುತ್ತಿರುವ ಸೇನಾ ತನಿಖೆ ಸಂಕೀರ್ಣವಾಗಿದೆ. ಆ ಶಾಲೆಯು ಇರಾನ್ನ ಸಕ್ರಿಯ ಕ್ಷಿಪಣಿ ತಾಣದ ಸಮೀಪದಲ್ಲಿದೆ" ಎಂದು ಕಳೆದ ತಿಂಗಳು ಅಮೆರಿಕದ ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಅಡ್ಮಿರಲ್ ಬ್ರಾಡ್ ಕೂಪರ್ ಹೇಳಿದ್ದರು.
ಇರಾನ್ ಅಧಿಕಾರಿಗಳ ಪ್ರಕಾರ, ಮಿನಾಬ್ ನಗರದ ಶಾಲೆ ಮೇಲೆ ನಡೆದ ದಾಳಿಯಲ್ಲಿ 168 ಮಕ್ಕಳು ಮೃತಪಟ್ಟಿದ್ದರು. US ಮಿಲಿಟರಿ ಆಂತರಿಕ ತನಿಖೆಯು, ಶಾಲೆ ಮೇಲಿನ ದಾಳಿಗೆ ಅಮೆರಿಕದ ಪಡೆಗಳು ಕಾರಣವೆಂದು ಕಂಡುಹಿಡಿದಿದೆ ಎಂದು Reuters ವರದಿ ಮಾಡಿತ್ತು.




