ಇಸ್ರೇಲ್ ಗೆ ವಾರ್ಷಿಕ 4 ಬಿಲಿಯನ್ ಡಾಲರ್ ನೆರವು ಸ್ಥಗಿತಕ್ಕೆ ಟ್ರಂಪ್ ನಿರ್ಧಾರ!
ವರ್ಷಾಂತ್ಯದ ಬಳಿಕ ಹಣಕಾಸು ನೆರವು ಇಲ್ಲ; ನೆತನ್ಯಾಹು ಜತೆ ತಿಂಗಳುಗಳ ಹಿಂದೆಯೇ ಒಪ್ಪಂದವಾಗಿತ್ತು ಎಂದ ಅಮೆರಿಕದ ಅಧ್ಯಕ್ಷ

Photo Credit : aljazeera.com
ವಾಷಿಂಗ್ಟನ್: ಇಸ್ರೇಲ್ ಗೆ ಪ್ರತಿವರ್ಷ ನೀಡುತ್ತಿದ್ದ 4 ಬಿಲಿಯನ್ ಡಾಲರ್ ಆರ್ಥಿಕ ನೆರವನ್ನು ಈ ವರ್ಷದ ಅಂತ್ಯದ ಬಳಿಕ ಸ್ಥಗಿತಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ತಿಂಗಳುಗಳ ಹಿಂದೆಯೇ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ ಎಂದು Al Jazeera ವರದಿ ಮಾಡಿದೆ.
'ಫಾಕ್ಸ್ ನ್ಯೂಸ್'ನ 'ಫಾಕ್ಸ್ ಆ್ಯಂಡ್ ಫ್ರೆಂಡ್ಸ್' ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, "ಇಸ್ರೇಲ್ ಗೆ ಅಮೆರಿಕ ಪ್ರತಿವರ್ಷ 4 ಬಿಲಿಯನ್ ಡಾಲರ್ ನೀಡುತ್ತಿತ್ತು. ಆದರೆ, ಈ ಹಣಕಾಸು ನೆರವನ್ನು ಇನ್ನು ಮುಂದೆ ನೀಡದಿರಲು ತಿಂಗಳುಗಳ ಹಿಂದೆಯೇ ಒಪ್ಪಂದ ಮಾಡಿಕೊಂಡಿದ್ದೇವೆ" ಎಂದರು.
"ಈ ವರ್ಷದ ಅಂತ್ಯದ ವೇಳೆಗೆ ಇಸ್ರೇಲ್ ಗೆ ಹಣ ನೀಡುವುದನ್ನು ನಿಲ್ಲಿಸಲಿದ್ದೇವೆ. ಆದರೆ, ಇಸ್ರೇಲ್ ಗೆ ಅಗತ್ಯವಿದ್ದರೆ ಸಹಾಯ ಮಾಡುತ್ತೇವೆ" ಎಂದು ಹೇಳಿದರು. ಆದರೆ, ಹಣಕಾಸು ನೆರವು ಸ್ಥಗಿತಗೊಳಿಸಿದ ಬಳಿಕ ಇಸ್ರೇಲ್ ಗೆ ಯಾವ ರೂಪದಲ್ಲಿ ನೆರವು ನೀಡಲು ಅಮೆರಿಕ ಉದ್ದೇಶಿಸಿದೆ ಎಂಬುದನ್ನು ಟ್ರಂಪ್ ಸ್ಪಷ್ಟಪಡಿಸಿಲ್ಲ.
►ಇಸ್ರೇಲ್ ನೆರವಿನ ಬಗ್ಗೆ ಅಮೆರಿಕದಲ್ಲಿ ಹೆಚ್ಚಿದ ಭಿನ್ನಮತ
ಇಸ್ರೇಲ್ ಗೆ ಅಮೆರಿಕ ನೀಡುತ್ತಿರುವ ಮಿಲಿಟರಿ ನೆರವು ಮತ್ತು ಇಸ್ರೇಲ್ ಬೆಂಬಲಿಗರು ಅಮೆರಿಕದ ಚುನಾವಣಾ ಅಭ್ಯರ್ಥಿಗಳಿಗೆ ನೀಡುತ್ತಿರುವ ರಾಜಕೀಯ ಪ್ರಚಾರದ ಕೊಡುಗೆಗಳು ಈ ವರ್ಷ ಅಲ್ಲಿನ ಡೆಮಾಕ್ರಟಿಕ್ ಹಾಗೂ ರಿಪಬ್ಲಿಕನ್ ಪಕ್ಷಗಳ ನಡುವೆ ಪ್ರಮುಖ ಚರ್ಚೆಯ ವಿಷಯವಾಗಿವೆ.
ದಶಕಗಳಿಂದ ಇಸ್ರೇಲ್ ಗೆ ದೃಢ ಬೆಂಬಲ ನೀಡುತ್ತಾ ಬಂದಿದ್ದ ಅಮೆರಿಕದ ರಾಜಕೀಯ ವಲಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಬದಲಾವಣೆ ಕಾಣಿಸಿಕೊಂಡಿದೆ. ಹಲವು ರಾಜಕೀಯ ನಾಯಕರು ಇಸ್ರೇಲ್ ವಿರುದ್ಧ ಬಹಿರಂಗವಾಗಿಯೇ ಕಟುವಾದ ಟೀಕೆಗಳನ್ನು ಮಾಡುತ್ತಿದ್ದಾರೆ. ಇದು ಇಸ್ರೇಲ್ ಗೆ ಬೆಂಬಲ ನೀಡುವ ವಿಚಾರದಲ್ಲಿ ಎರಡೂ ಪ್ರಮುಖ ಪಕ್ಷಗಳ ನಡುವೆ ಹಿಂದೆ ಇದ್ದ ಒಮ್ಮತದಲ್ಲಿ ಬಿರುಕು ಮೂಡಿರುವುದನ್ನು ಸೂಚಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.
ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧದ ವಿಚಾರವಾಗಿ ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಹಲವು ನಾಯಕರು ಇಸ್ರೇಲ್ ಗೆ ನೀಡುತ್ತಿರುವ ಬೆಂಬಲವನ್ನು ವಿರೋಧಿಸುತ್ತಿದ್ದಾರೆ. ಈ ನಡುವೆ, ಇಸ್ರೇಲ್ ಗೆ ನೀಡುವ ನೆರವನ್ನು ಕಡಿತಗೊಳಿಸುವ ಪ್ರಸ್ತಾವವೊಂದನ್ನು ಅಮೆರಿಕದ ಪ್ರತಿನಿಧಿಗಳ ಸಭೆ (House of representatives) ಕಳೆದ ಜುಲೈನಲ್ಲಿ ತಿರಸ್ಕರಿಸಿತ್ತು. ಡೆಮಾಕ್ರಟಿಕ್ ಪಕ್ಷದ ಸುಮಾರು ಅರ್ಧದಷ್ಟು ಸದಸ್ಯರು ಈ ಪ್ರಸ್ತಾವವನ್ನು ಬೆಂಬಲಿಸಿದ್ದರು.
ಮಧ್ಯಪ್ರಾಚ್ಯದಲ್ಲಿ ಅಮೆರಿಕದ ನೀತಿಯನ್ನು ಬಹಿರಂಗವಾಗಿ ಟೀಕಿಸುತ್ತಿರುವ ರಿಪಬ್ಲಿಕನ್ ನಾಯಕ ಹಾಗೂ ಕೆಂಟುಕಿಯ ನಿರ್ಗಮಿತ ಪ್ರತಿನಿಧಿ ಥಾಮಸ್ ಮಾಸ್ಸಿ ಅವರು ಈ ಪ್ರಸ್ತಾವವನ್ನು ಮಂಡಿಸಿದ್ದರು. ವಿದೇಶಾಂಗ ಇಲಾಖೆಯ ವೆಚ್ಚಕ್ಕೆ ಸಂಬಂಧಿಸಿದ ಮಸೂದೆಗೆ ತಿದ್ದುಪಡಿಯಾಗಿ ಇದನ್ನು ಸಲ್ಲಿಸಲಾಗಿತ್ತು.
ಇಸ್ರೇಲ್ ಗೆ ನೆರವು ಕಡಿತಗೊಳಿಸುವ ತಿದ್ದುಪಡಿಯ ವಿರುದ್ಧ 314 ಸದಸ್ಯರು ಮತ ಚಲಾಯಿಸಿದರೆ, 104 ಸದಸ್ಯರು ಅದರ ಪರವಾಗಿ ಮತ ಚಲಾಯಿಸಿದ್ದರು. ಈ ಮೂಲಕ ನೆರವು ಕಡಿತದ ಪ್ರಸ್ತಾವ ಪ್ರತಿನಿಧಿಗಳ ಸಭೆ (House of representatives)ಯಲ್ಲಿ ಸೋಲು ಕಂಡಿತ್ತು.






