ವೆನೆಝುವೆಲಾದ ಮೇಲೆ ಅಮೆರಿಕದಿಂದ ದಾಳಿ; ಅಧ್ಯಕ್ಷ ಮಡುರೊ ಸೆರೆ: ಟ್ರಂಪ್ ಹೇಳಿಕೆ

ಡೊನಾಲ್ಡ್ ಟ್ರಂಪ್ / ನಿಕೋಲಸ್ ಮಡುರೊ (Photo credit: PTI)
ಕ್ಯಾರಕಾಸ್,ಜ.3: ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಮೇಲೆ ಅಮೆರಿಕವು ಶನಿವಾರ ಬೆಳಗಿನ ಜಾವ ಭಾರೀ ವಾಯುದಾಳಿಯನ್ನು ನಡೆಸಿದ್ದು,ಅದರ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ವಶಕ್ಕೆ ತೆಗೆದುಕೊಂಡು ದೇಶದಿಂದ ಹೊರಕ್ಕೆ ಸಾಗಿಸಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದ್ದಾರೆ.
ಕ್ಯಾರಕಾಸ್ನಾದ್ಯಂತ ಹಲವಾರು ಸ್ಫೋಟಗಳು ಸಂಭವಿಸಿದ್ದು, ವಿಮಾನಗಳು ಕಡಿಮೆ ಎತ್ತರದಲ್ಲಿ ಹಾರಾಡುತ್ತಿದ್ದವು. ಇದರ ಬೆನ್ನಿಗೇ ಮಡುರೊ ಸರಕಾರವು ಅಮೆರಿಕವು ನಾಗರಿಕ ಮತ್ತು ಮಿಲಿಟರಿ ಸ್ಥಾವರಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿತ್ತು. ಇದನ್ನು ‘ಸಾಮ್ರಾಜ್ಯಶಾಹಿ ದಾಳಿ’ ಎಂದು ಬಣ್ಣಿಸಿದ್ದ ಅದು ಬೀದಿಗಿಳಿದು ಹೋರಾಡುವಂತೆ ನಾಗರಿಕರನ್ನು ಆಗ್ರಹಿಸಿತ್ತು.
ಪ್ರಸ್ತುತ ದೇಶವನ್ನು ಯಾರು ನಡೆಸುತ್ತಿದ್ದಾರೆ ಮತ್ತು ಮಡುರೊ ಎಲ್ಲಿದ್ದಾರೆ ಎನ್ನುವುದು ತಕ್ಷಣಕ್ಕೆ ತಿಳಿದುಬಂದಿಲ್ಲ.
ವೆನೆಜುವೆಲಾದ ಕಾನೂನಿನಡಿ ಉಪಾಧ್ಯಕ್ಷೆ ಡೆಲ್ಸಿ ರಾಡ್ರಿಗ್ಯೂಜ್ ಅವರು ಅಧಿಕಾರವನ್ನು ವಹಿಸಿಕೊಳ್ಳುತ್ತಾರೆ. ದಾಳಿಯ ಬಳಿಕ ಡೆಲ್ಸಿ ಹೇಳಿಕೆಯೊಂದನ್ನು ಹೊರಡಿಸಿದ್ದಾರಾದರೂ ಅವರು ಅಧಿಕಾರವನ್ನು ವಹಿಸಿಕೊಂಡಿದ್ದಾರೆಯೇ ಎನ್ನುವುದು ದೃಢಪಟ್ಟಿಲ್ಲ.
ಅಮೆರಿಕದ ಕಾನೂನಿನಡಿ ದಾಳಿಯ ಕಾನೂನಾತ್ಮಕ ಪರಿಣಾಮಗಳು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ತಾನು ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಅವರೊಂದಿಗೆ ಮಾತನಾಡಿದ್ದು, ಅವರು ದಾಳಿಯ ಕುರಿತು ವಿವರಗಳನ್ನು ನೀಡಿದ್ದಾರೆ. ಅಮೆರಿಕದ ಭದ್ರತಾ ಸಿಬ್ಬಂದಿಗಳು ಮಡುರೊರನ್ನು ಬಂಧಿಸಿದ್ದು, ಅವರು ಅಮೆರಿಕದಲ್ಲಿ ಕ್ರಿಮಿನಲ್ ಆರೋಪಗಳ ವಿಚಾರಣೆಯನ್ನು ಎದುರಿಸಲಿದ್ದಾರೆ ಎಂದು ರೂಬಿಯೊ ತನಗೆ ತಿಳಿಸಿದ್ದಾರೆ ಎಂದು ಉಟಾ ರಾಜ್ಯದ ರಿಪಬ್ಲಿಕನ್ ಸೆನೆಟರ್ ಮೈಕ್ ಲೀ ಎಕ್ಸ್ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಮಾರ್ಚ್ 2020ರಲ್ಲಿ ನ್ಯೂಯಾರ್ಕ್ನಲ್ಲಿ ಮಡುರೊ ವಿರುದ್ಧ ‘ಮಾದಕದ್ರವ್ಯ ಭಯೋತ್ಪಾದನೆ’ ಒಳಸಂಚಿನ ಆರೋಪವನ್ನು ಹೊರಿಸಲಾಗಿತ್ತು. ಮಡುರೊ ಕೊನೆಯ ಬಾರಿಗೆ ಶುಕ್ರವಾರ ಕ್ಯಾರಕಸ್ನಲ್ಲಿ ಚೀನಿ ನಿಯೋಗದೊಂದಿಗೆ ಭೇಟಿ ಸಂದರ್ಭ ರಾಷ್ಟ್ರೀಯ ದೂರದರ್ಶನದಲ್ಲಿ ಕಾಣಿಸಿಕೊಂಡಿದ್ದರು. ಸ್ಫೋಟಗಳಿಗೆ ಮುನ್ನ ಅಮೆರಿಕದ ವಾಯುಯಾನ ಆಡಳಿತವು ‘ಪ್ರಸ್ತುತ ನಡೆಯುತ್ತಿರುವ ಮಿಲಿಟರಿ ಚಟುವಟಿಕೆ’ಯಿಂದಾಗಿ ವೆನೆಜುವೆಲಾದ ವಾಯು ಪ್ರದೇಶದಲ್ಲಿ ತನ್ನ ವಾಣಿಜ್ಯ ವಿಮಾನಗಳ ಹಾರಾಟವನ್ನು ನಿಷೇಧಿಸಿತ್ತು.
ಆಡಳಿತ ಪಕ್ಷದ ಭದ್ರನೆಲೆಯಾಗಿರುವ ಕ್ಯಾರಕಾಸ್ನ ನೆರೆಯ ಪ್ರದೇಶಗಳಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಮತ್ತು ನಾಗರಿಕ ಸೇನೆಯ ಸಮವಸ್ತ್ರಧಾರಿ ಸದಸ್ಯರು ಬೀದಿಗಿಳಿದಿದ್ದರು. ಆದರೆ ನಗರದ ಇತರ ಪ್ರದೇಶಗಳಲ್ಲಿ ದಾಳಿಯ ನಂತರ ಬೀದಿಗಳು ನಿರ್ಜನವಾಗಿದ್ದವು. ನಗರದ ಹಲವೆಡೆಗಳಲ್ಲಿ ವಿದ್ಯುತ್ ಪೂರೈಕೆ ಕಡಿತಗೊಂಡಿತ್ತು. ಆದರೆ ವಾಹನಗಳು ಮುಕ್ತವಾಗಿ ಸಂಚರಿಸುತ್ತಿದ್ದವು.
ವೆನೆಜುವೆಲಾದಲ್ಲಿರುವ ಅಮೆರಿಕದ ರಾಯಭಾರ ಕಚೇರಿಯನ್ನು 2019ರಿಂದ ಮುಚ್ಚಲಾಗಿದ್ದರೂ ಅದರ ವೆಬ್ಸೈಟ್ನಲ್ಲಿಯ ಪೋಸ್ಟ್ವೊಂದು ದೇಶದಲ್ಲಿನ ತನ್ನ ಪ್ರಜೆಗಳಿಗೆ ಎಚ್ಚರಿಕೆಯನ್ನು ಹೊರಡಿಸಿದ್ದು,ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದುಕೊಳ್ಳುವಂತೆ ಸೂಚಿಸಿದೆ.
ಟ್ರಂಪ್ ಸರಕಾರವು ದಾಳಿಗಳ ಬಗ್ಗೆ ಅಮೆರಿಕ ಕಾಂಗ್ರೆಸ್ಗೆ ಅಧಿಕೃತವಾಗಿ ಮಾಹಿತಿ ನೀಡಿತ್ತೇ ಎನ್ನುವುದು ಸ್ಪಷ್ಟವಾಗಿಲ್ಲ.
ಆದಾಗ್ಯೂ,ಮಿಲಿಟರಿ ವಿಷಯಗಳ ಮೇಲೆ ಅಧಿಕಾರ ಹೊಂದಿರುವ ಕಾಂಗ್ರೆಸ್ನ ಉಭಯ ಸದನಗಳಲ್ಲಿಯ ಸಶಸ್ತ್ರ ಪಡೆಗಳ ಸಮಿತಿಗಳಿಗೆ ಯಾವುದೇ ಕ್ರಮದ ಬಗ್ಗೆ ಸರಕಾರವು ಮಾಹಿತಿ ನೀಡಿರಲಿಲ್ಲ ಎಂದು ವಿಷಯವನ್ನು ಬಲ್ಲ ಮೂಲಗಳು ತಿಳಿಸಿವೆ.







