ಚುನಾವಣೆಯಲ್ಲಿ ಅಕ್ರಮ ಆರೋಪ: ಒಬಾಮಾರಿಗೆ ಕೈಕೋಳ ತೊಡಿಸಿ, ಕಂಬಿಗಳ ಹಿಂದೆ ಹಾಕಿರುವ AI ವಿಡಿಯೋ ಹಂಚಿಕೊಂಡ ಡೊನಾಲ್ಡ್ ಟ್ರಂಪ್!

Photo credit: X/@TrumpDailyPosts
ವಾಷಿಂಗ್ಟನ್: ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಹೊಸ ಗುರಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆಗಿದ್ದು, 2016ರ ಚುನಾವಣೆಯಲ್ಲಿ ಅವರು ಅಕ್ರಮವೆಸಗಿದ್ದರು ಎಂದು ಡೊನಾಲ್ಡ್ ಟ್ರಂಪ್ ಆಡಳಿತ ಆರೋಪಿಸತೊಡಗಿದೆ. ಈ ಹಿನ್ನೆಲೆಯಲ್ಲಿ, ಡೊನಾಲ್ಡ್ ಟ್ರಂಪ್ ಕೃತಕ ಬುದ್ಧಿಮತ್ತೆ (AI) ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಶ್ವೇತಭವನದ ಓವಲ್ ಕಚೇರಿಯಲ್ಲಿ ಬರಾಕ್ ಒಬಾಮಾರನ್ನು FBI ಬಂಧಿಸಿ, ಅವರನ್ನು ಕಂಬಿಗಳ ಹಿಂದೆ ಹಾಕಿರುವಂತೆ ಆ ವಿಡಿಯೊವನ್ನು ವಿನ್ಯಾಸಗೊಳಿಸಲಾಗಿದೆ.
ತಮ್ಮ ಟ್ರುತ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಡೊನಾಲ್ಡ್ ಟ್ರಂಪ್ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಕೂಡಲೇ ವೈರಲ್ ಆಗಿದೆ. ಆದರೆ, ಈ ವಿಡಿಯೊಗೆ ಸಾಮಾಜಿಕ ಮಾಧ್ಯಮದಲ್ಲಿ ಜನರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಎಪ್ಸ್ಟೀನ್ ಫೈಲ್ಸ್ ನಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರದ ಭಾಗವಾಗಿ ಇಂತಹ ಪ್ರಚೋದನಾಕಾರಿ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಡೀಪ್ ಫೇಕ್ ತಂತ್ರಜ್ಞಾನವನ್ನು ಬಳಸಿ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿರುವ ಈ AI ವಿಡಿಯೊಗೆ “ಯಾರೂ ಕಾನೂನಿಗೆ ಅತೀತರಲ್ಲ” ಎಂಬ ಶೀರ್ಷಿಕೆ ನೀಡಲಾಗಿದೆ. “ಕಾನೂನಿಗಿಂತ ಯಾರೂ ದೊಡ್ಡವರಲ್ಲ, ವಿಶೇಷವಾಗಿ ಅಧ್ಯಕ್ಷರು” ಎಂದು ಬರಾಕ್ ಒಬಾಮಾ ಹೇಳುತ್ತಿರುವಂತೆ ಈ ವಿಡಿಯೊವನ್ನು ಸೃಷ್ಟಿಸಲಾಗಿದೆ. ನಂತರ, ಡೆಮಾಕ್ರಟಿಕ್ ಪಕ್ಷದ ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಹಲವಾರು ನಾಯಕರು, “ಯಾರೂ ಕಾನೂನಿಗಿಂತ ಅತೀತರಲ್ಲ” ಎಂದು ಒಕ್ಕೊರಲಿನಿಂದ ಹೇಳುತ್ತಿರುವುದು ಈ ವಿಡಿಯೊದಲ್ಲಿದೆ
ಇದಾದ ನಂತರ, ಓವಲ್ ಕಚೇರಿಯಲ್ಲಿ FBI ಅಧಿಕಾರಿಗಳು ಬರಾಕ್ ಒಬಾಮಾರನ್ನು ಬಂಧಿಸಿರುವಂತೆ ಹಾಗೂ ಇದನ್ನು ಕಂಡು ಡೊನಾಲ್ಡ್ ಟ್ರಂಪ್ ವ್ಯಂಗ್ಯದ ನಗೆ ನಗುತ್ತಿರುವಂತೆ ಈ ವಿಡಿಯೊದಲ್ಲಿ ಸೆರೆಯಾಗಿದೆ. ಕೆಲ ಕ್ಷಣದ ನಂತರ, ಬರಾಕ್ ಒಬಾಮಾ ಅವರು ಕೈದಿಯ ದಿರಿಸು ಧರಿಸಿ, ಸರಳುಗಳ ಹಿಂದೆ ಇರುವಂತೆಯೂ ಈ ವಿಡಿಯೊದಲ್ಲಿದೆ.
Donald J. Trump Truth Social 07.20.25 06:47 PM EST pic.twitter.com/Xf5LYzkZiI
— Fan Donald J. Trump Posts From Truth Social (@TrumpDailyPosts) July 20, 2025







