ಅಮೆರಿಕ | ಎಪ್ಸ್ಟೀನ್ ಕಡತಗಳ ಬಿಡುಗಡೆ ಕುರಿತ ಮಸೂದೆಗೆ ಟ್ರಂಪ್ ಅಂಕಿತ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (File Photo: PTI)
ವಾಷಿಂಗ್ಟನ್ : ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಪ್ರಕರಣದ ಕಡತಗಳನ್ನು ಬಿಡುಗಡೆ ಮಾಡುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂಕಿತ ಹಾಕಿದ್ದಾರೆ. ಆರಂಭದಲ್ಲಿ ಕಡತಗಳ ಬಿಡುಗಡೆಗೆ ವಿರೋಧಿಸಿದರೂ ನಂತರ ತನ್ನದೇ ಪಕ್ಷದ ರಾಜಕೀಯ ಒತ್ತಡಕ್ಕೆ ಮಣಿದು ಟ್ರಂಪ್ ಮಸೂದೆಗೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.
ಇದರಿಂದಾಗಿ ನ್ಯಾಯಾಂಗ ಇಲಾಖೆಯು ಎಪ್ಸ್ಟೀನ್ಗೆ ಸಂಬಂಧಿಸಿದ ಎಲ್ಲಾ ಕಡತಗಳು ಮತ್ತು ಪತ್ರ ವ್ಯವಹಾರಗಳು ಹಾಗೂ 2019ರಲ್ಲಿ ಫೆಡರಲ್ ಜೈಲಿನಲ್ಲಿ ನಡೆದ ಅವರ ಸಾವಿನ ಕುರಿತು ತನಿಖೆಗೆ ಸಂಬಂಧಿಸಿದ ಮಾಹಿತಿಗಳನ್ನು ಬಿಡುಗಡೆ ಮಾಡಬೇಕಾಗಿದೆ.
ಆದರೆ ಜೆಫ್ರಿ ಎಪ್ಸ್ಟೀನ್ ಪ್ರಕರಣದ ಕುರಿತ ವಿವರಗಳನ್ನು ತನಿಖೆಯ ಕಾರಣದಿಂದ ಅಗತ್ಯಬಿದ್ದರೆ ಮುಚ್ಚಿಡಬಹುದು. ಮುಜುಗರ, ಹೆಸರಿಗೆ ಹಾನಿ ಅಥವಾ ರಾಜಕೀಯ ಕಾರಣಕ್ಕೆ ಮಾಹಿತಿಯನ್ನು ತಡೆಹಿಡಿಯುವಂತಿಲ್ಲ ಎಂದು ವರದಿಯಾಗಿದೆ.
"ನಮ್ಮ ಅಭೂತಪೂರ್ವ ಗೆಲುವಿನಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಡೆಮೋಕ್ರಾಟ್ಗಳು ಎಪ್ಸ್ಟೀನ್ ಪ್ರಕರಣವನ್ನು ಬಳಸಿಕೊಂಡಿದ್ದಾರೆ. ಇದು ರಿಪಬ್ಲಿಕನ್ ಪಕ್ಷಕ್ಕಿಂತ ಅವರ ಮೇಲೆಯೇ ಹೆಚ್ಚು ಪರಿಣಾಮ ಬೀರುತ್ತದೆ" ಎಂದು ಟ್ರಂಪ್ ಮಸೂದೆಗೆ ಅಂಕಿತ ಹಾಕಿರುವ ಕುರಿತು ಹೇಳಿದ್ದಾರೆ.







