ಚೀನಾದೊಂದಿಗೆ ಸುಂಕದ ಒಪ್ಪಂದ ಗಡುವು 90 ದಿನ ವಿಸ್ತರಣೆ; ಕಾರ್ಯನಿರ್ವಾಹಕ ಆದೇಶಕ್ಕೆ ಟ್ರಂಪ್ ಸಹಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ | PC : REUTERS
ವಾಷಿಂಗ್ಟನ್, ಆ.12: ಚೀನಾದೊಂದಿಗಿನ ಸುಂಕ ಒಪ್ಪಂದದ ಗಡುವನ್ನು 90 ದಿನ ವಿಸ್ತರಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಸಹಿ ಹಾಕಿರುವುದಾಗಿ ಶ್ವೇತಭವನದ ಮೂಲಗಳನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.
ಜುಲೈಯಲ್ಲಿ ಸ್ವೀಡನ್ ನಲ್ಲಿ ಉಭಯ ದೇಶಗಳ ಅಧಿಕಾರಿಗಳ ನಡುವೆ ನಡೆದ ಉನ್ನತ ಮಟ್ಟದ ಮಾತುಕತೆಯ ಬಳಿಕ ಗಡುವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ವರದಿ ಹೇಳಿದೆ.
ಅಮೆರಿಕ-ಚೀನಾದ ನಡುವಿನ ಸುಂಕ ಒಪ್ಪಂದದ ಈ ಹಿಂದಿನ ಗಡುವು ಸೋಮವಾರ ಮಧ್ಯರಾತ್ರಿ ಕೊನೆಗೊಂಡಿದ್ದು ಅಂತಿಮ ಕ್ಷಣದಲ್ಲಿ ಗಡುವನ್ನು ವಿಸ್ತರಿಸುವ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ. ಗಡುವನ್ನು ಮತ್ತೆ ವಿಸ್ತರಿಸುವ ಸಾಧ್ಯತೆಯಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಟ್ರಂಪ್ ` ಏನೆಲ್ಲಾ ನಡೆಯುತ್ತದೆ ಎಂಬುದನ್ನು ಕಾದು ನೋಡೋಣ. ಅವರು ಉತ್ತಮವಾಗಿ ವ್ಯವಹರಿಸುತ್ತಿದ್ದಾರೆ. ಅಧ್ಯಕ್ಷ ಕ್ಸಿ ಜಿಂಪಿಂಗ್ ಮತ್ತು ನನ್ನ ನಡುವಿನ ಸಂಬಂಧ ಉತ್ತಮವಾಗಿದೆ' ಎಂದು ಉತ್ತರಿಸಿದ್ದರು.
ಇದಕ್ಕೂ ಮುನ್ನ, ಅಮೆರಿಕದಿಂದ ಸೋಯಾಬೀನ್ಸ್ ಖರೀದಿಯನ್ನು ನಾಲ್ಕು ಪಟ್ಟು ಹೆಚ್ಚಿಸುವಂತೆ ಮತ್ತು ರಶ್ಯದ ತೈಲ ಖರೀದಿಯನ್ನು ಸ್ಥಗಿತಗೊಳಿಸುವಂತೆ ಚೀನಾವನ್ನು ಅಮೆರಿಕ ಆಗ್ರಹಿಸಿದ್ದು ಇದನ್ನು ಉಲ್ಲಂಘಿಸುವ ಚೀನಾದ ಸಂಸ್ಥೆಗಳ ಮೇಲೆ ಅಧೀನ ಸುಂಕ(ಹೆಚ್ಚುವರಿ ಸುಂಕ) ವಿಧಿಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದರು.
ಪ್ರಸ್ತುತ ಚೀನಾದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕ 30% ಸುಂಕ ವಿಧಿಸುತ್ತಿದ್ದರೆ, ಚೀನಾವು ಅಮೆರಿಕದ ಸರಕುಗಳ ಮೇಲೆ 10% ಸುಂಕ ವಿಧಿಸುತ್ತಿದೆ. ಗಡುವನ್ನು ವಿಸ್ತರಿಸಿರದಿದ್ದರೆ ಚೀನಾದ ಸರಕುಗಳ ಮೇಲಿನ ಸುಂಕ 145%ಕ್ಕೆ ಮತ್ತು ಅಮೆರಿಕದ ಸರಕುಗಳ ಮೇಲೆ ಚೀನಾದ ಸುಂಕ 125%ಕ್ಕೆ ಏರಿಕೆಯಾಗುತ್ತದೆ. ಸುಂಕ ನೀತಿಯ ಬಗ್ಗೆ ಒಮ್ಮತವನ್ನು ತಲುಪಲು ಎರಡೂ ದೇಶಗಳು ಇತ್ತೀಚಿನ ದಿನಗಳಲ್ಲಿ ಪುನರಾವರ್ತಿತ ಪ್ರಯತ್ನಗಳನ್ನು ಮಾಡಿವೆ.







