ಮೊದಲ ದಿನವೇ 200ಕ್ಕೂ ಹೆಚ್ಚು ಕಾರ್ಯಾದೇಶಗಳಿಗೆ ಟ್ರಂಪ್ ಸಹಿ

PC: x.com/TheCalvinCooli1
ವಾಷಿಂಗ್ಟನ್ ಡಿಸಿ: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಅಧಿಕಾರಾವಧಿಯ ಮೊದಲ ದಿನ ಗಡಿಭದ್ರತೆ, ವಿದ್ಯುತ್, ಅಮೆರಿಕನ್ ಕುಟುಂಬಗಳ ಜೀವನ ವೆಚ್ಚವನ್ನು ತಗ್ಗಿಸುವುದು ಮತ್ತು ಎಲ್ಲ ಫೆಡರಲ್ ಸರ್ಕಾರಗಳಲ್ಲಿ ಡಿಇಐ ಕಾರ್ಯಕ್ರಮವನ್ನು ಕೊನೆಗೊಳಿಸುವುದು ಸೇರಿದಂತೆ 200ಕ್ಕೂ ಹೆಚ್ಚು ಕಾರ್ಯಾದೇಶಗಳಿಗೆ ಸಹಿ ಮಾಡಿದರು.
ಹತ್ತಾರು ಮಹತ್ವದ ಕಾರ್ಯಾಚರಣೆಗಳನ್ನು ಒಳಗೊಂಡ ಹಲವು ವಿವಿಧೋದ್ದೇಶದ ಕಾರ್ಯಾದೇಶಗಳಿಗೆ ಸಹಿ ಮಾಡುವರು ಎಂದು ಹಿರಿಯ ಅಧಿಕಾರಿಯೊಬ್ಬರು ಫಾಕ್ಸ್ ನ್ಯೂಸ್ ಡಿಜಿಟಲ್ ಗೆ ಮಾಹಿತಿ ನೀಡಿದ್ದಾರೆ.
"ಅಧ್ಯಕ್ಷರು ಸರಣಿ ಐತಿಹಾಸಿಕ ಕಾರ್ಯಾದೇಶಗಳನ್ನು ಮತ್ತು ಕ್ರಮಗಳನ್ನು ಜಾರಿಗೊಳಿಸಿದ್ದು, ಅಮೆರಿಕದ ಸಾರ್ವಭೌಮತ್ವದ ಪುನಃಸ್ಥಾಪನೆ ಸೇರಿದಂತೆ ಇವು ಮೂಲಭೂತವಾಗಿ ಅಮೆರಿಕನ್ ಸರ್ಕಾರವನ್ನು ಸುಧಾರಿಸಲಿವೆ" ಎಂದು ಅವರು ವಿವರಿಸಿದ್ದಾರೆ.
ಮೊದಲ ದಿನದ ಆದೇಶಗಳಲ್ಲಿ ರಾಷ್ಟ್ರೀಯ ಗಡಿಭಾಗದ ತುರ್ತು ಪರಿಸ್ಥಿತಿ ಘೋಷಣೆ, ದಕ್ಷಿಣ ಗಡಿಯ ಸುಭದ್ರತೆ ಮತ್ತು ರಕ್ಷಣೆಯನ್ನು ಖಾತರಿಪಡಿಸಲು ಅಮೆರಿಕದ ಮಿಲಿಟರಿ ಮತ್ತು ಹೋಮ್ ಲ್ಯಾಂಡ್ ಸೆಕ್ಯುರಿಟಿ ವಿಭಾಗಕ್ಕೆ ಸೂಚನೆ ನೀಡಿರುವುದು ಸೇರಿದ್ದು, ಅಮೆರಿಕದಿಂದ ಕಾರ್ಯಾಚರಣೆ ನಡೆಸುವ ಅಪರಾಧಿ ಕೂಟಗಳನ್ನು ಛಿದ್ರಗೊಳಿಸುವುದನ್ನು ರಾಷ್ಟ್ರೀಯ ಆದ್ಯತೆಯಾಗಿ ರೂಪಿಸಲು ಉದ್ದೇಶಿಸಲಾಗಿದೆ.
ಎಲ್ಲ ಅಕ್ರಮ ವಲಸಿಗರಿಗೆ ಗಡಿಯನ್ನು ಮುಚ್ಚುವ ಸಂಬಂಧ ಟ್ರಂಪ್ ಸುಗ್ರೀವಾಜ್ಞೆ ಹೊರಡಿಸಲಿದ್ದಾರೆ. ಎಫ್ಬಿಐ, ಐಸಿಇ, ಸಿಇಎ ಮತ್ತು ಇತರ ಏಜೆನ್ಸಿಗಳ ಅಧಿಕಾರಿಗಳನ್ನು ಒಳಗೊಂಡ ಕಾರ್ಯಪಡೆಯನ್ನು ರಚಿಸಿ ಅಪರಾಧ ಕೂಟಗಳನ್ನು ನಿರ್ಮೂಲನೆ ಮಾಡುವ ಹೊಣೆಯನ್ನು ಇದಕ್ಕೆ ನೀಡುವರು ಎನ್ನಲಾಗಿದೆ.







