ರಷ್ಯಾ ನಿರ್ಬಂಧ ಮಸೂದೆಗೆ ಟ್ರಂಪ್ ಅಂಕಿತ : ಭಾರತ ಸೇರಿ ತೈಲ ಖರೀದಿದಾರರ ಮೇಲೆ ಶೇ.100ರವರೆಗೆ ಸುಂಕಕ್ಕೆ ಅವಕಾಶ

ಡೊನಾಲ್ಡ್ ಟ್ರಂಪ್ | Photo: PTI
ವಾಷಿಂಗ್ಟನ್: ಇತ್ತೀಚೆಗಷ್ಟೇ ಅಮೆರಿಕದ ಸಂಸತ್ತಿನಲ್ಲಿ ಅಂಗೀಕಾರಗೊಂಡ, ರಷ್ಯಾದ ತೈಲ ಮತ್ತು ಅನಿಲವನ್ನು ಖರೀದಿಸುವುದನ್ನು ಮುಂದುವರಿಸಿರುವ ದೇಶಗಳ ಮೇಲೆ ದಂಡ ವಿಧಿಸಲು ಅವಕಾಶ ನೀಡುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
ಈ ಕಾನೂನು ಜಾರಿಗೆ ಬಂದ ಬಳಿಕ, ಭಾರತ ಸೇರಿದಂತೆ ರಷ್ಯಾದ ತೈಲ ಮತ್ತು ಅನಿಲವನ್ನು ಖರೀದಿಸುತ್ತಿರುವ ದೇಶಗಳ ಮೇಲೆ ಶೇ.100ರವರೆಗೆ ಸುಂಕ ವಿಧಿಸಲು ಅಮೆರಿಕ ಆಡಳಿತಕ್ಕೆ ಹೊಸ ಅಧಿಕಾರ ದೊರೆಯಲಿದೆ. ಇದೀಗ ಈ ಮಸೂದೆ ಅಧಿಕೃತವಾಗಿ ಕಾನೂನಾಗಿ ಜಾರಿಗೆ ಬರಲಿದೆ.
ಈ ಕಾಯ್ದೆ ಜಾರಿಗೆ ಬಂದ 30 ದಿನಗಳೊಳಗೆ, ರಷ್ಯಾದ ಕಚ್ಚಾ ತೈಲ ಅಥವಾ ಅನಿಲವನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ಐದು ದೇಶಗಳಿಂದ ಅಮೆರಿಕಕ್ಕೆ ಆಮದಾಗುವ ಸರಕುಗಳ ಮೇಲೆ ಶೇ.100ರವರೆಗೆ ಸುಂಕ ವಿಧಿಸುವಂತೆ ಟ್ರಂಪ್ ಅವರಿಗೆ ಈ ಕಾಯ್ದೆ ನಿರ್ದೇಶಿಸುತ್ತದೆ.
ಅಲ್ಲದೆ, ಕಾಯ್ದೆ ಜಾರಿಗೆ ಬಂದ ಬಳಿಕ ರಷ್ಯಾದ ತೈಲ ಅಥವಾ ಅನಿಲವನ್ನು ಉದ್ದೇಶಪೂರ್ವಕವಾಗಿ ಹೊಸದಾಗಿ ಖರೀದಿಸುವ ದೇಶಗಳು ಹಾಗೂ ರಷ್ಯಾ ಮೇಲಿನ ನಿರ್ಬಂಧಗಳನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡುವ ಅಗ್ರ ಐದು ದೇಶಗಳ ಪಟ್ಟಿಯಲ್ಲಿರುವ ರಾಷ್ಟ್ರಗಳಿಗೂ ಈ ಕಾಯ್ದೆ ಅನ್ವಯಿಸುತ್ತದೆ.
“ಲಿಂಡ್ಸೆ ಒ. ಗ್ರಹಾಂ ರಷ್ಯಾ ಮತ್ತು ಇರಾನ್ ನಿರ್ಬಂಧಗಳ ಕಾಯ್ದೆ, 2026” ಎಂದು ಕರೆಯಲಾಗುವ ಈ ಕಾಯ್ದೆಯು ರಷ್ಯಾದ ಅಧಿಕಾರಿಗಳು, ಬ್ಯಾಂಕುಗಳು ಹಾಗೂ ಇತರ ಸಂಸ್ಥೆಗಳ ಮೇಲೆ ನಿರ್ಬಂಧಗಳನ್ನು ವಿಧಿಸಲು ಅಮೆರಿಕ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ರಷ್ಯಾದ ಇಂಧನ ವ್ಯಾಪಾರವನ್ನು ಗುರಿಯಾಗಿಸುವ ಈ ಕಾಯ್ದೆ, ಇರಾನ್ ಮೇಲಿನ ಪ್ರಸ್ತುತ ನಿರ್ಬಂಧಗಳನ್ನೂ ವಿಸ್ತರಿಸುತ್ತದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಶ್ವೇತಭವನ, “ಶುಕ್ರವಾರ, ಸೆಪ್ಟೆಂಬರ್ 18, 2026ರಂದು ಅಧ್ಯಕ್ಷರು H.R. 5334, ‘ಲಿಂಡ್ಸೆ ಒ. ಗ್ರಹಾಂ ರಷ್ಯಾ ಮತ್ತು ಇರಾನ್ ನಿರ್ಬಂಧಗಳ ಕಾಯ್ದೆ, 2026’ಕ್ಕೆ ಸಹಿ ಹಾಕಿ ಕಾನೂನಾಗಿ ಜಾರಿಗೊಳಿಸಿದ್ದಾರೆ. ಈ ಕಾಯ್ದೆಯು ರಷ್ಯಾ ಮೇಲಿನ ಶಾಸನಬದ್ಧ ನಿರ್ಬಂಧಗಳು, ಸುಂಕಗಳು ಮತ್ತು ನಿಷೇಧಗಳನ್ನು ಅಧಿಕೃತಗೊಳಿಸುವುದರ ಜೊತೆಗೆ ಅವುಗಳನ್ನು ವಿಸ್ತರಿಸುತ್ತದೆ. ಅಲ್ಲದೆ, ಇರಾನ್ ಮೇಲಿನ ಪ್ರಸ್ತುತ ನಿರ್ಬಂಧಗಳನ್ನೂ ಮುಂದುವರಿಸುತ್ತದೆ” ಎಂದು ತಿಳಿಸಿದೆ.






