ಏಳು ದಿನಗಳಲ್ಲಿ ಜಾರಿಯಾಗಲಿರುವ ವ್ಯಾಪಾರ ಸುಂಕಕ್ಕೆ ಟ್ರಂಪ್ ಸಹಿ

ವಾಷಿಂಗ್ಟನ್: ಭಾರತ ಸೇರಿದಂತೆ 12ಕ್ಕೂ ಹೆಚ್ಚು ದೇಶಗಳ ಮೇಲೆ ವ್ಯಾಪಾರ ಸುಂಕ ವಿಧಿಸುವ ಕಾರ್ಯಾದೇಶಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ್ದಾರೆ. ಇದು ಏಳು ದಿನಗಳಲ್ಲಿ ಜಾರಿಗೆ ಬರಲಿದೆ.
ಭಾರತದ ಮೇಲೆ ಶೇಕಡ 25ರಷ್ಟು ಸುಂಕ ವಿಧಿಸಲಾಗಿದ್ದು, ಹೆಚ್ಚುವರಿಯಾಗಿ ರಷ್ಯಾ ಜತೆಗೆ ಭಾರತ ಮಾಡುವ ರಕ್ಷಣಾ ಸಲಕರಣೆಗಳು ಮತ್ತು ಕಚ್ಚಾ ತೈಲ ವಹಿವಾಟಿಗೆ ದಂಡ ವಿಧಿಸಲೂ ನಿರ್ಧರಿಸಲಾಗಿದೆ. ಆದರೆ ದಂಡದ ಪ್ರಮಾಣವನ್ನು ಇನ್ನೂ ಪ್ರಕಟಿಸಿಲ್ಲ. ಭಾರತದ ಜತೆಗಿನ ವ್ಯಾಪಾರ ಒಪ್ಪಂದ ಮಾತುಕತೆ ನಿರೀಕ್ಷಿತ ಪ್ರಗತಿ ಸಾಧಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ವೇತಭವನ ಪ್ರಕಟಿಸಿದೆ.
ಥಾಯ್ಲೆಂಡ್ ಮೇಲಿನ ಸುಂಕವನ್ನು ಶೇಕಡ 19ಕ್ಕೆ ಇಳಿಸಿರುವ ಕ್ರಮವನ್ನು ಆ ದೇಶ ಸ್ವಾಗತಿಸಿದ್ದು, "ಇದು ಥಾಯ್ಲೆಂಡ್ನ ರಫ್ತು ನೆಲೆಯನ್ನು ವಿಸ್ತರಿಸಲಿದೆ ಮತ್ತು ಧೀರ್ಘಾವಧಿ ಆರ್ಥಿಕ ಸ್ಥಿರತೆ ಸಾಧಿಸಲು ನೆರವಾಗುವ ಮೂಲಕ ಉಭಯ ದೇಶಗಳ ಗೆಲುವಿನ ಸ್ಥಿತಿಗೆ ಕಾರಣವಾಗಲಿದೆ" ಎಂದು ಸರ್ಕಾರದ ವಕ್ತಾರ ಜಿರಾಯು ಹೌಂಗಸಾಬ ಹೇಳಿದ್ದಾರೆ. ಶೇಕಡ 19ಕ್ಕೆ ಸುಂಕ ಇಳಿಸಿರುವ ಟ್ರಂಪ್ ನಡೆಯನ್ನು ಕಾಂಬೋಡಿಯಾ ಅಧ್ಯಕ್ಷರು ಕೂಡಾ ಸ್ವಾಗತಿಸಿದ್ದಾರೆ.
ತೈವಾನ್ ಮೇಲೆ ತಾತ್ಕಾಲಿಕವಾಗಿ ವಿಧಿಸಿರುವ ಶೇಕಡ 20 ಸುಂಕವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಒತ್ತಾಯ ಮಾಡುವುದಾಗಿ ಆ ದೇಶ ಹೇಳಿದೆ. ಪರಸ್ಪರ ಒಪ್ಪಂದಕ್ಕೆ ಬರುವ ಮೂಲಕ ಇದನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದು ಅಧ್ಯಕ್ಷ ಲಾಯ್ ಚಿಂಗ್ ತೇ ಫೇಸ್ಬುಕ್ನಲ್ಲಿ ಹೇಳಿದ್ದಾರೆ.
ಆಗಸ್ಟ್ 7ರಿಂದ ಹೊಸ ಸುಂಕ ಜಾರಿಗೆ ಬರಲಿದ್ದು, 68 ದೇಶಗಳು ಹಾಗೂ ಯೂರೋಪಿಯನ್ ಒಕ್ಕೂಟದ 27 ಸದಸ್ಯ ದೇಶಗಳಿಗೆ ಇದು ಅನ್ವಯವಾಘಲಿದೆ. ಈ ಆದೇಶದಲ್ಲಿ ಹೆಸರಿಸದ ದೇಶಗಳು ನಿಗದಿತ ಶೇಕಡ 10ರ ಸುಂಕ ಎದುರಿಸಲಿವೆ ಎಂದು ಆದೇಶದಲ್ಲಿ ಸ್ಪಷ್ಟಪಡಿಲಾಗಿದೆ.
ಕೆನಡಾ ಮೇಲಿನ ಸುಂಕವನ್ನು ಶೇಕಡ 25ರಿಂದ 25ಕ್ಕೆ ಹೆಚ್ಚಿಸಲಾಗಿದೆ. ಬೆಜಿಲ್ ಮೇಲೆ ಒಟ್ಟು ಶೇಕಡ 50ರಷ್ಟು ಸುಂಕ ವಿಧಿಸಿರುವ ಅನ್ಯಾಯದ ವಿರುದ್ಧ ಹೋರಾಡುವುದಾಗಿ ಆ ದೇಶ ಪ್ರಕಟಿಸಿದೆ. ಇದರಿಂದ ಕಾಫಿ, ಮಾಂಸದ ರಫ್ತಿಗೆ ಧಕ್ಕೆಯಾಗಲಿದೆ ಎಂದು ಹಣಕಾಸು ಸಚಿವ ಫೆರ್ನಾಂಡೊ ಹದ್ದದ್ ಹೇಳಿದ್ದಾರೆ.







