ಯುದ್ಧ ಕೊನೆಗೊಳಿಸಲು ಉಕ್ರೇನ್ ಗೆ ಇಷ್ಟವಿಲ್ಲ: ಟ್ರಂಪ್ ವಾಗ್ದಾಳಿ

ಡೊನಾಲ್ಡ್ ಟ್ರಂಪ್ (Photo: PTI)
ವಾಶಿಂಗ್ಟನ್ : ರಶ್ಯ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಶ್ಯ ವಿರುದ್ಧದ ಯುದ್ಧವನ್ನು ಕೊನೆಗೊಳಿಸಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬಯಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ರಶ್ಯ-ಉಕ್ರೇನ್ ಯುದ್ಧವನ್ನು ಅಂತ್ಯಗೊಳಿಸುವ ಉದ್ದೇಶದ ಮಾತುಕತೆಗಳಿಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ರಶ್ಯ ವಿರುದ್ಧದ ಹೊಸ ನಿರ್ಬಂಧಗಳನ್ನು ತಡೆಹಿಡಿಯಲು ನಿರ್ಧರಿಸಿರುವುದಾಗಿ ತಮ್ಮ ಸಾಮಾಜಿಕ ಜಾಲತಾಣ `ಟ್ರೂತ್ ಸೋಶಿಯಲ್'ನಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದಾರೆ.
ರಶ್ಯ ಕುರಿತ ನನ್ನ ನಿರ್ಧಾರ ಅತ್ಯಂತ ಸರಳವಾದದ್ದು. ನಾನು ಯುದ್ಧದಲ್ಲಿ ಶಾಂತಿ ಸ್ಥಾಪಿಸಲು ಮಾತುಕತೆ ನಡೆಸುತ್ತಿದ್ದೇನೆ. ಆದರೆ ಝೆಲೆನ್ಸ್ಕಿಗೆ ಯಾವುದರ ಬಗ್ಗೆಯೂ ಕಾಳಜಿಯಿಲ್ಲ. ಯುರೋಪ್ ದೇಶಗಳು ಅವರಿಗೆ ನೀಡುತ್ತಿರುವ ಭಾರಿ ಪ್ರಮಾಣದ ಹಣದ ಹಿನ್ನೆಲೆಯಲ್ಲಿ, ಅವರಿಗೆ ಈ ಯುದ್ಧವನ್ನು ಮುಗಿಸಲು ಇಷ್ಟವಿಲ್ಲ ಮತ್ತು ಬಹುಶಃ ಎಂದಿಗೂ ಇರಲಿಲ್ಲ' ಎಂದು ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.




