ಹಾರ್ಮುಝ್ ಜಲಸಂಧಿಗೆ ‘ಟ್ರಂಪ್ ಜಲಸಂಧಿ’ ಎಂದು ಹೆಸರು ಬದಲಿಸಲು ಟ್ರಂಪ್ ಸಲಹೆ

Photo: x.com/AJEnglish
ವಾಷಿಂಗ್ಟನ್, ಸೆ. 3: ಇರಾನ್ ನೊಂದಿಗಿನ ಯುದ್ಧದ ನಡುವೆಯೇ ಜಾಗತಿಕವಾಗಿ ಮಹತ್ವದ ಜಲಮಾರ್ಗವಾಗಿರುವ ಹಾರ್ಮುಝ್ ಜಲಸಂಧಿಗೆ ‘ಟ್ರಂಪ್ ಜಲಸಂಧಿ’ ಎಂದು ಮರುನಾಮಕರಣ ಮಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಸಲಹೆ ನೀಡಿದ್ದಾರೆ.
‘ಈಗ ಅದು ಅಮೆರಿಕದ ನಿಯಂತ್ರಣದಲ್ಲಿದೆ. ಹೀಗಾಗಿ ಹಾರ್ಮುಝ್ ಜಲಸಂಧಿಯ ಹೆಸರನ್ನು ‘ಟ್ರಂಪ್ ಜಲಸಂಧಿ’ ಎಂದು ಬದಲಾಯಿಸಬೇಕೇ? ಹಾರ್ಮುಝ್ ಜಲಸಂಧಿಯ ಪರಿಸ್ಥಿತಿ ಹಿಂದೆಂದಿಗಿಂತಲೂ ಬಿಗಡಾಯಿಸಿದೆ’ ಎಂದು ಟ್ರಂಪ್ ತಮ್ಮ ‘ಟ್ರುತ್ ಸೋಷಿಯಲ್’ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಟ್ರಂಪ್ ಅವರ ಈ ಹೇಳಿಕೆಯನ್ನು ಶ್ವೇತಭವನವೂ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದೆ.
ಇತ್ತೀಚಿನ ವಾರಗಳಲ್ಲಿ ಹಾರ್ಮುಝ್ ಜಲಸಂಧಿಯ ಮೇಲೆ ಸಾರ್ವಭೌಮತ್ವ ಪಡೆಯುವ ಕುರಿತು ಟ್ರಂಪ್ ಪದೇಪದೇ ಹೇಳಿಕೆ ನೀಡುತ್ತಿದ್ದಾರೆ. ಜಲಸಂಧಿಯನ್ನು ‘ಹೊಸ ಅಮೆರಿಕದ ಪ್ರದೇಶ’ ಎಂದು ಬಿಂಬಿಸುವ ನಕ್ಷೆಯೊಂದನ್ನೂ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.
ಟ್ರಂಪ್ ಮುಂದಿಟ್ಟಿರುವ ಭೌಗೋಳಿಕ ಹೆಸರು ಬದಲಾವಣೆಯ ಇತ್ತೀಚಿನ ಪ್ರಸ್ತಾಪ ಇದಾಗಿದೆ. ಕೆನಡಾದೊಂದಿಗಿನ ವ್ಯಾಪಾರ ಸಮರದ ನಡುವೆಯೇ ಒಂಟಾರಿಯೊ ಸರೋವರವನ್ನು ‘ಲೇಕ್ ಅಮೆರಿಕಾ’ ಎಂದು ಮರುನಾಮಕರಣ ಮಾಡುವಂತೆ ಅವರು ಆದೇಶಿಸಿದ ಒಂದು ವಾರದ ಬಳಿಕ ಈ ಹೇಳಿಕೆ ಬಂದಿದೆ.
ಅಧಿಕಾರಕ್ಕೆ ಮರಳಿದ 2025ರ ಜನವರಿಯಲ್ಲಿ ಟ್ರಂಪ್ ಮೆಕ್ಸಿಕೊ ಕೊಲ್ಲಿಯನ್ನು ‘ಗಲ್ಫ್ ಆಫ್ ಅಮೆರಿಕಾ’ ಎಂದು ಮರುನಾಮಕರಣ ಮಾಡುವ ಆದೇಶ ಹೊರಡಿಸಿದ್ದರು.
ತೈಲ ಸಾಗಣೆಯ ಪ್ರಮುಖ ಮಾರ್ಗ
ಇರಾನ್ ನೊಂದಿಗಿನ ಸಂಘರ್ಷದ ಹಿನ್ನೆಲೆಯಲ್ಲಿ, ವಿಶ್ವದ ತೈಲ ಬಳಕೆಯ ಸುಮಾರು ಐದನೇ ಒಂದು ಭಾಗಕ್ಕೆ ಸಮಾನವಾದ ತೈಲ ಸಾಗಣೆಗೆ ಪ್ರಮುಖ ಮಾರ್ಗವಾಗಿರುವ ಹಾರ್ಮುಝ್ ಜಲಸಂಧಿಯನ್ನು ಇರಾನ್ ಮುಚ್ಚಿದೆ ಎಂದು ವರದಿ ತಿಳಿಸಿದೆ.
ಇರಾನ್ ಹೊಸದಾಗಿ ಜಲಮಾರ್ಗದಲ್ಲಿ ಗಣಿಗಾರಿಕೆ ನಡೆಸಲು ಮುಂದಾಗಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಹಾರ್ಮುಝ್ ಜಲಸಂಧಿಯ ಸಮೀಪ ಅಮೆರಿಕದ ಪಡೆಗಳು ಮಂಗಳವಾರ ಮತ್ತೆ ದಾಳಿಗಳನ್ನು ನಡೆಸಿವೆ. ಇದರ ಬೆನ್ನಲ್ಲೇ ತೈಲ ಬೆಲೆಗಳು ಮತ್ತೆ ಏರಿಕೆಯಾಗಿವೆ.
ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯನ್ನು ಸಂಪರ್ಕಿಸುವ ಹಾರ್ಮುಝ್ ಜಲಸಂಧಿಯು ಜಾಗತಿಕ ಇಂಧನ ಸಾಗಣೆಯ ಅತ್ಯಂತ ಪ್ರಮುಖ ಮಾರ್ಗಗಳಲ್ಲಿ ಒಂದಾಗಿದೆ. ಇಲ್ಲಿ ದೀರ್ಘಕಾಲದವರೆಗೆ ಸಾಗಣೆ ಸ್ಥಗಿತಗೊಂಡರೆ ಜಾಗತಿಕ ತೈಲ ಪೂರೈಕೆ ಹಾಗೂ ಬೆಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಹೆಸರು ಬದಲಾವಣೆಯ ಸರಣಿ
ಟ್ರಂಪ್ ಅವರ ಹಲವು ಹೆಸರು ಬದಲಾವಣೆ ಪ್ರಸ್ತಾಪಗಳು ಆರಂಭದಲ್ಲಿ ತಮಾಷೆಯ ಹೇಳಿಕೆಗಳಂತೆ ಕಂಡುಬಂದಿದ್ದರೂ, ಬಳಿಕ ಅವುಗಳನ್ನು ಜಾರಿಗೆ ತರಲು ಅವರು ಕ್ರಮ ಕೈಗೊಂಡಿದ್ದಾರೆ.
2025ರಲ್ಲಿ ಮೆಕ್ಸಿಕೊ ಕೊಲ್ಲಿಗೆ ‘ಗಲ್ಫ್ ಆಫ್ ಅಮೆರಿಕಾ’ ಎಂದು ಹೆಸರು ಬದಲಿಸುವ ಕ್ರಮ ಕೈಗೊಂಡಿದ್ದ ಅವರು, ಇತ್ತೀಚೆಗೆ ಒಂಟಾರಿಯೊ ಸರೋವರವನ್ನು ‘ಲೇಕ್ ಅಮೆರಿಕಾ’ ಎಂದು ಮರುನಾಮಕರಣ ಮಾಡುವಂತೆ ಆದೇಶಿಸಿದ್ದಾರೆ. ಇದೀಗ ಹಾರ್ಮುಝ್ ಜಲಸಂಧಿಗೆ ‘ಟ್ರಂಪ್ ಜಲಸಂಧಿ’ ಎಂದು ಹೆಸರು ಬದಲಿಸುವ ಸಲಹೆ ನೀಡಿದ್ದಾರೆ.






