ಸಿರಿಯಾ ಅಧ್ಯಕ್ಷರನ್ನು ಭೇಟಿ ಮಾಡಿದ ಟ್ರಂಪ್: ಸಿರಿಯಾದ ಮೇಲಿನ ನಿಷೇಧ ತೆರವು

PC : aljazeera.com
ರಿಯಾದ್: ಸೌದಿ ಅರೆಬಿಯಾಕ್ಕೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಯಾದ್ನಲ್ಲಿ ನಡೆಯಲಿರುವ ಗಲ್ಫ್ ನಾಯಕರ ಸಮಾವೇಶದ ನೇಪಥ್ಯದಲ್ಲಿ ಸಿರಿಯಾದ ಮಧ್ಯಂತರ ಅಧ್ಯಕ್ಷ ಅಹ್ಮದ್ ಅಲ್-ಶರಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ವರದಿಯಾಗಿದೆ.
ಕಳೆದ 25 ವರ್ಷಗಳಲ್ಲೇ ಸಿರಿಯಾದ ನಾಯಕರನ್ನು ಭೇಟಿ ಮಾಡಿದ ಪ್ರಥಮ ಅಮೆರಿಕನ್ ಅಧ್ಯಕ್ಷ ಎನಿಸಿಕೊಂಡಿರುವ ಟ್ರಂಪ್ , ಅಸಾದ್ ಆಡಳಿತದ ಅವಧಿಯಲ್ಲಿ ಸಿರಿಯಾದ ಮೇಲೆ ವಿಧಿಸಲಾಗಿರುವ ಕ್ರೂರ ಮತ್ತು ಗಂಭೀರ ನಿರ್ಬಂಧಗಳನ್ನು ತೆರವುಗೊಳಿಸುವುದಾಗಿ ಘೋಷಿಸಿದ್ದಾರೆ. ಸಿರಿಯಾದ ಮೇಲಿನ ಕಠಿಣ ನಿರ್ಬಂಧಗಳನ್ನು ತೆರವುಗೊಳಿಸಬೇಕೆಂದು ಸಿರಿಯಾದ ಮಿತ್ರದೇಶಗಳಾದ ಟರ್ಕಿ ಮತ್ತು ಸೌದಿ ಅರೆಬಿಯಾಗಳು ಅಮೆರಿಕವನ್ನು ಒತ್ತಾಯಿಸಿದ್ದವು. ಇದು ಸಿರಿಯನ್ನರು ಪ್ರಕಾಶಿಸುವ ಸಮಯವಾಗಿದೆ ಮತ್ತು ನಿರ್ಬಂಧಗಳನ್ನು ಸರಾಗಗೊಳಿಸಿರುವುದು ಅವರಿಗೆ ಮುನ್ನಡೆಯಲು ಅವಕಾಶ ನೀಡಲಿದೆ' ಎಂದು ಟ್ರಂಪ್ ಹೇಳಿದ್ದಾರೆ. ಸಿರಿಯಾದ ವಿದೇಶಾಂಗ ಸಚಿವಾಲಯವು ಟ್ರಂಪ್ ನಿರ್ಧಾರವನ್ನು `ಮಹತ್ವದ ತಿರುವು' ಎಂದು ಕರೆದಿದ್ದು ಇದು ಸ್ಥಿರತೆ ತರಲು ನೆರವಾಗಲಿದೆ ಎಂದಿದೆ.
ಆದರೆ ಸಿರಿಯಾವನ್ನು `ಭಯೋತ್ಪಾದನೆಯನ್ನು ಪ್ರಾಯೋಜಿಸುವ ರಾಷ್ಟ್ರಗಳ ಕಪ್ಪು ಪಟ್ಟಿ'ಯಿಂದ ಅಮೆರಿಕ ತೆಗೆದುಹಾಕುವ ಬಗ್ಗೆ ಟ್ರಂಪ್ ಯಾವುದೇ ಸೂಚನೆಯನ್ನು ನೀಡಿಲ್ಲ. ಯುರೋಪಿಯನ್ ಯೂನಿಯನ್ ಸೇರಿದಂತೆ ಇತರ ಪಾಶ್ಚಿಮಾತ್ಯ ದೇಶಗಳು ಈಗಾಗಲೇ ಸಿರಿಯಾ ವಿರುದ್ಧದ ನಿರ್ಬಂಧಗಳನ್ನು ತೆರವುಗೊಳಿಸಿವೆ.