ಬ್ರಿಕ್ಸ್ನ ಅಮೆರಿಕ ವಿರೋಧಿ ನೀತಿಯನ್ನು ಬೆಂಬಲಿಸುವ ದೇಶಗಳಿಗೆ 10% ಹೆಚ್ಚುವರಿ ಸುಂಕ : ಟ್ರಂಪ್ ಎಚ್ಚರಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್: ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಅಮೆರಿಕ ವಿರೋಧಿ ನೀತಿಗೆ ಬೆಂಬಲಿಸುವ ದೇಶಗಳಿಗೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ರುತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ರಿಕ್ಸ್ನ ಅಮೆರಿಕ ವಿರೋಧಿ ನೀತಿಗಳೊಂದಿಗೆ ತಮ್ಮನ್ನು ತಾವು ಹೊಂದಿಸಿಕೊಳ್ಳುವ ಯಾವುದೇ ದೇಶಕ್ಕೆ ಹೆಚ್ಚುವರಿಯಾಗಿ ಶೇ.10 ಸುಂಕ ವಿಧಿಸಲಾಗುತ್ತದೆ. ಈ ನೀತಿಗೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಹೇಳಿದ್ದಾರೆ.
ಆದರೆ, ಬ್ರಿಕ್ಸ್ ಸಮಾವೇಶದಲ್ಲಿ ಮಾಡಿಕೊಂಡಿರುವ ಅಥವಾ ಮಾಡಿಕೊಳ್ಳಲಿರುವ ಅಮೆರಿಕ ವಿರೋಧಿ ನೀತಿಗಳು ಯಾವುದು ಎಂಬುದು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ.
ಟ್ರಂಪ್ ಆಡಳಿತವು ಹೆಚ್ಚಿನ ಸುಂಕಗಳ ಮೇಲಿನ 90 ದಿನಗಳ ರಿಲೀಫ್ ಬುಧವಾರ ಮುಕ್ತಾಯಗೊಳ್ಳಲಿದೆ. ಮುಂಬರುವ ದಿನಗಳಲ್ಲಿ ಹಲವು ದೇಶಗಳಿಗೆ ಸುಂಕ ಪತ್ರಗಳನ್ನು ಕಳುಹಿಸಲು ಅಮೆರಿಕ ಸಿದ್ಧತೆ ನಡೆಸುತ್ತಿರುವ ಮಧ್ಯೆ ಈ ಹೇಳಿಕೆ ಹೊರ ಬಿದ್ದಿದೆ.
ಬ್ರೆಜಿಲ್, ಚೀನಾ, ದಕ್ಷಿಣ ಆಫ್ರಿಕಾ ಮತ್ತು ಭಾರತವನ್ನು ಒಳಗೊಂಡಿರುವ ರಾಷ್ಟ್ರಗಳ ಗುಂಪಾದ ಬ್ರಿಕ್ಸ್ ನಾಯಕರು ಸಭೆಯಲ್ಲಿ ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್ ದಾಳಿಗಳನ್ನು ಖಂಡಿಸಿದರು. ಗಾಝಾ ಪಟ್ಟಿಯಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸರಕಾರವನ್ನು ಒತ್ತಾಯಿಸಿದರು. ಮಧ್ಯಪ್ರಾಚ್ಯದ ಸಂಘರ್ಷಗಳಿಗೆ "ನ್ಯಾಯಯುತ ಮತ್ತು ಶಾಶ್ವತ" ಪರಿಹಾರವನ್ನು ಕಂಡುಕೊಳ್ಳುವಂತೆ ಒತ್ತಾಯಿಸಿದರು. ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗವಹಿಸಿದ್ದರು.







