ಹಾರ್ಮುಝ್ನಲ್ಲಿ ದಾಳಿ ಮುಂದುವರಿಸಿದರೆ ಸೇತುವೆ, ವಿದ್ಯುತ್ ಸ್ಥಾವರ ನಾಶಪಡಿಸುತ್ತೇವೆ : ಇರಾನ್ಗೆ ಟ್ರಂಪ್ ಬೆದರಿಕೆ

ಡೊನಾಲ್ಡ್ ಟ್ರಂಪ್ | Photo Credit : PTI
ಹೊಸದಿಲ್ಲಿ,ಜು.22: ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ಯಾವುದೇ ಹಡಗಿನ ಮೇಲೆ ದಾಳಿ ನಡೆಸಿದರೂ, ಅಮೆರಿಕವು ಆ ದೇಶದ ಸೇತುವೆಯನ್ನು ಅಥವಾ ವಿದ್ಯುತ್ ಸ್ಥಾವರವನ್ನು ನಾಶಪಡಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಎಚ್ಚರಿಕೆ ನೀಡಿದ್ದಾರೆ.
‘‘ಇರಾನ್ ಹಾರ್ಮುಝ್ನಲ್ಲಿ ಕ್ಷಿಪಣಿ, ರಾಕೆಟ್ , ಡ್ರೋನ್ ಅಥವಾ ಇನ್ನ್ಯಾವುದೇ ರೀತಿಯಲ್ಲಿ ದಾಳಿ ನಡೆಸಲಿ. ನಮಗೆ ಅದು ಮುಖ್ಯವಲ್ಲ. ರಾಜಧಾನಿ ಟೆಹರಾನ್ ಸಮೀಪದ ಪ್ರದೇಶಗಳು ಸೇರಿದಂತೆ ಇರಾನ್ನ ಎಲ್ಲೆಡೆ ಇರುವ ಸೇತುವೆ ಅಥವಾ ವಿದ್ಯುತ್ ಸ್ಥಾವರಗಳನ್ನು ನಾಶಪಡಿಸಲಿದೆ ’’ಎಂದು ಟ್ರಂಪ್ ಎಕ್ಸ್ನಲ್ಲಿ ಬರೆದಿದ್ದಾರೆ. ಇರಾನ್ ಮೇಲೆ ಮಂಗಳವಾರ ಸತತ 11ನೇ ಸುತ್ತಿನ ದಾಳಿಯನ್ನು ನಡೆಸಿದ ಬೆನ್ನಲ್ಲೇ ಟ್ರಂಪ್ ಈ ಎಚ್ಚರಿಕೆಯನ್ನು ನೀಡಿದ್ದಾರೆ.
ಮಂಗಳವಾರ ಟ್ರಂಪ್ ನೀಡಿದ ಹೇಳಿಕೆಯೊಂದರಲ್ಲಿ, ಇರಾನ್ ಮೇಲೆ ದಾಳಿ ನಡೆಸುವ ಅಮೆರಿಕದ ಕೆಲಸವು ಇನ್ನೂ ಪೂರ್ಣಗೊಂಡಿಲ್ಲವೆಂದು ಹೇಳಿದ್ದಾರೆ. ಒಂದು ವೇಳೆ ಮಧ್ಯದಲ್ಲೇ ನಾವು ಯುದ್ಧದಿಂದ ನಿರ್ಗಮಿಸಿದರೆ, ಇರಾನ್ನ ಪುನರ್ನಿರ್ಮಾಣಕ್ಕೆ 20 ರಿಂದ 25 ವರ್ಷಗಳೇ ಆಗಲಿದೆ ಎಂದು ಅವರು ಹೇಳಿದ್ದಾರೆ.
ಇರಾನ್ ನಾಯಕರು ಅಮೆರಿಕದ ಜೊತೆ ಮಾತುಕತೆಗಾಗಿ ಹಾತೊರೆಯುತ್ತಿದ್ದಾರೆ. ಆದರೆ, ಅವರು ಅರ್ಥಪೂರ್ಣವಾಗಿ ನಮ್ಮೊಂದಿಗೆ ಮಾತುಕತೆಗೆ ಸಿದ್ಧರಾಗುವವರೆಗೆ, ಅವರೊಂದಿಗೆ ಮಾತುಕತೆ ನಡೆಸಲು ನಮಗೆ ಆಸಕ್ತಿಯಿಲ್ಲವೆಂದು ಟ್ರಂಪ್ ಹೇಳಿದ್ದರು.






