ಕ್ರಿಪ್ಟೋ ಉದ್ಯಮದಿಂದ 2025ರಲ್ಲಿ 120 ಕೋಟಿ ಡಾಲರ್ ಆದಾಯಗಳಿಸಿದ ಟ್ರಂಪ್ : ವರದಿ

ಡೊನಾಲ್ಡ್ ಟ್ರಂಪ್ | Photo Credit : PTI
ನ್ಯೂಯಾರ್ಕ್, ಜು.1: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಮರಳಿದ ಮೊದಲ ವರ್ಷದಲ್ಲಿ, ತಮ್ಮ ಕುಟುಂಬದ ಕ್ರಿಪ್ಟೋಕರೆನ್ಸಿ ವ್ಯವಹಾರಗಳಿಂದ ಸುಮಾರು 120 ಕೋಟಿ ಡಾಲರ್ ಆದಾಯ ಗಳಿಸಿದ್ದಾರೆ ಎಂದು ಮಂಗಳವಾರ ಬಿಡುಗಡೆಯಾದ ಆರ್ಥಿಕ ವಿವರಣೆಗಳ ದಾಖಲೆಗಳು ತಿಳಿಸಿವೆ.
`ಯುಎಸ್ ಆಫೀಸ್ ಆಫ್ ಗೌರ್ನಮೆಂಟ್ ಎಥಿಕ್ಸ್' ಮಂಗಳವಾರ ಬಿಡುಗಡೆ ಮಾಡಿದ ದಾಖಲೆಯ ಪ್ರಕಾರ, ಟ್ರಂಪ್ ಅವರು `ವಲ್ರ್ಡ್ ಲಿಬರ್ಟಿ ಫೈನಾನ್ಶಿಯಲ್' ಎಂಬ ನವೋದ್ಯಮದ ಸಂಬಂಧದಿಂದ 2025ರಲ್ಲಿ ಸುಮಾರು 55 ಕೋಟಿ ಡಾಲರ್ ಹಣವನ್ನು ಪಡೆದಿದ್ದಾರೆ. ಈ ಸಂಸ್ಥೆಯನ್ನು ಸೆಪ್ಟೆಂಬರ್ 2024ರಲ್ಲಿ ಟ್ರಂಪ್ ಅವರ ಪುತ್ರರು ಮತ್ತು ಟ್ರಂಪ್ ಅವರ ಮಧ್ಯಪ್ರಾಚ್ಯದ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಅವರ ಪುತ್ರ ಸೇರಿ ಜಂಟಿಯಾಗಿ ಸ್ಥಾಪಿಸಿದ್ದರು.
ಜನವರಿ 2025 ರಲ್ಲಿ ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ಪರವಾನಗಿ ಒಪ್ಪಂದದ ಅಡಿಯಲ್ಲಿ ಲಭಿಸಿದ 63.5 ಕೋಟಿ ಡಾಲರ್ ರಾಯಲ್ಟಿ ಮೊತ್ತದ ಬಗ್ಗೆಯೂ ಈ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಫೋಬ್ರ್ಸ್ ಸಂಸ್ಥೆಯ ಪ್ರಕಾರ, ಅಧ್ಯಕ್ಷರ ಈ ಕ್ರಿಪ್ಟೋ ವ್ಯವಹಾರಗಳೇ ಅವರ ವೈಯಕ್ತಿಕ ಆಸ್ತಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. 2024 ಮತ್ತು 2026 ರ ನಡುವೆ ಅವರ ಆಸ್ತಿ ಮೌಲ್ಯವು 2.3 ಶತಕೋಟಿ ಡಾಲರ್ನಿಂದ 6.5 ಶತಕೋಟಿ ಡಾಲರ್ಗೆ, ಅಂದರೆ ಸರಿಸುಮಾರು ಮೂರು ಪಟ್ಟು ಹೆಚ್ಚಾಗಿದೆ.
ಮಾಜಿ ರಿಯಲ್ ಎಸ್ಟೇಟ್ ಉದ್ಯಮಿಯಾದ ಟ್ರಂಪ್ ಅವರು ಹಿತಾಸಕ್ತಿ ಸಂಘರ್ಷದ ಆರೋಪಗಳನ್ನು ನಿಯಮಿತವಾಗಿ ಎದುರಿಸುತ್ತಿದ್ದಾರೆ. ವಿಶೇಷವಾಗಿ ತಾವು ಕ್ರಿಪ್ಟೋಕರೆನ್ಸಿ ಉದ್ಯಮದಲ್ಲಿ ಹೂಡಿಕೆ ಮಾಡಿರುವಾಗಲೇ, ಅಧ್ಯಕ್ಷರಾಗಿ ಈ ವಲಯದ ನಿಯಮಗಳನ್ನು ಸಡಿಲಗೊಳಿಸಲು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ ಮತ್ತು ಇದರಿಂದಾಗಿ ಕ್ರಿಪ್ಟೋ ಆಸ್ತಿಗಳ ಬೆಲೆಗಳು ಗಗನಕ್ಕೇರುವಂತಾಗಿದೆ ಎಂಬ ಆರೋಪ ಅವರ ಮೇಲಿದೆ. ಆದರೆ ಶ್ವೇತಭವನವು ಈ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.






