ಪುಟಿನ್- ಝೆಲೆನ್ಸ್ಕಿ ಮಾತುಕತೆ ಆಯೋಜಿಸಲಿರುವ ಟ್ರಂಪ್; ಬಳಿಕ ತ್ರಿಪಕ್ಷೀಯ ಸಭೆ

ವಾಷಿಂಗ್ಟನ್: ಉಕ್ರೇನ್ ಯುದ್ಧವನ್ನು ನಿಲ್ಲಿಸುವ ಪ್ರಯತ್ನವಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝಲೆನ್ಸ್ಕಿ ನಡುವೆ ಮುಖಾಮುಖಿ ಮಾತುಕತೆಗೆ ವೇದಿಕೆ ಕಲ್ಪಿಸುವ ಮೂಲಕ ಮಹತ್ವದ ರಾಜತಾಂತ್ರಿಕ ಮುನ್ನಡೆ ಸಾಧಿಸಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ.
ಶ್ವೇತಭವನದಲ್ಲಿ ಝೆಲೆನ್ಸ್ಕಿ ಮತ್ತು ಇತರ ಏಳು ಮಂದಿ ಯೂರೋಪ್ ಮುಖಂಡರ ಜತೆಗಿನ ಮಾತುಕತೆಯ ಬಳಿಕ ಪುಟಿನ್ ಜತೆ ದೂರವಾಣಿಯಲ್ಲಿ ಮಾತನಾಡಿರುವುದಾಗಿ ಟ್ರಂಪ್ ಟ್ರುತ್ ಸೋಶಿಯಲ್ ನಲ್ಲಿ ಬಹಿರಂಗಪಡಿಸಿದ್ದಾರೆ.
"ಆರಂಭದಲ್ಲಿ ನಾನು ಪುಟಿನ್ ಮತ್ತು ಝೆಲೆನ್ಸ್ಕಿ ನಡುವೆ ಪರಸ್ಪರ ಭೇಟಿಯನ್ನು ಆಯೋಜಿಸಲಿದ್ದು, ಸ್ಥಳವನ್ನು ಇನ್ನಷ್ಟೇ ನಿರ್ಧರಿಸಬೇಕಿದೆ" ಎಂದು ಹೇಳಿದ್ದಾರೆ. ಈ ಮಾತುಕತೆಯ ಬಳಿಕ ಮೂವರು ಭೇಟಿ ಮಾಡಿ ತ್ರಿಪಕ್ಷೀಯ ಸಭೆ ನಡೆಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಉಪಾಧ್ಯಕ್ಷರಾದ ಜೆ.ಡಿ.ವಾನ್ಸ್, ರಕ್ಷಣಾ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತು ವಿಶೇಷ ರಾಜತಾಂತ್ರಿಕ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಈ ನಿಟ್ಟಿನಲ್ಲಿ ಮಾಸ್ಕೊ ಮತ್ತು ಕೀವ್ ಜತೆ ಸಂಪರ್ಕದಲ್ಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಝೆಲೆನ್ಸ್ಕಿ ಮತ್ತು ಏಳು ಮಂದಿ ಯೂರೋಪಿಯನ್ ನಾಯಕರ ಭೇಟಿ ವೇಳೆ ಅಲ್ಪವಿರಾಮ ಪಡೆದ ಟ್ರಂಪ್, ಪುಟಿನ್ ಜತೆ ದೂರವಾಣಿ ಮಾತುಕತೆ ನಡೆಸಿದರು ಎನ್ನಲಾಗಿದೆ. "ಝೆಲೆನ್ಸ್ಕಿಯವರನ್ನು ಭೇಟಿ ಮಾಡಲು ನಾನು ಸಿದ್ಧ" ಎಂದು ಪುಟಿನ್ ಹೇಳಿದ್ದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.







