12 ದೇಶದ ಪ್ರಜೆಗಳ ಅಮೆರಿಕ ಪ್ರವೇಶಕ್ಕೆ ಟ್ರಂಪ್ ನಿಷೇಧ

PC | PTI
ವಾಷಿಂಗ್ಟನ್: ರಾಷ್ಟ್ರೀಯ ಭದ್ರತೆಗೆ ಅಪಾಯ ಸಾಧ್ಯತೆಯ ಹಿನ್ನೆಲೆಯಲ್ಲಿ 12 ದೇಶಗಳ ಪ್ರಜೆಗಳು ಅಮೆರಿಕ ಪ್ರವೇಸುವುದನ್ನು ನಿಷೇಧಿಸುವ ಆದೇಶವನ್ನು ಟ್ರಂಪ್ ಹೊರಡಿಸಿದ್ದಾರೆ ಎಂದು ಶ್ವೇತಭವನ ಪ್ರಕಟಿಸಿದೆ.
"ಸ್ಕ್ರೀನಿಂಗ್ ಮತ್ತು ಪರಿಶೀಲನೆಗೆ ಸಂಬಂಧಿಸಿದ ಅಸಮರ್ಪಕ ವ್ಯವಸ್ಥೆಯಿಂದಾಗಿ ಈ ದೇಶಗಳ ಪ್ರಜೆಗಳು ಅಮೆರಿಕಕ್ಕೆ ಅತ್ಯಂತ ಅಪಾಯಕಾರಿಯಾಗುವ ಸಾಧ್ಯತೆಯಿದೆ ಎಂಬ ನಿರ್ಧಾರಕ್ಕೆ ಬಂದ ಹಿನ್ನೆಲೆಯಲ್ಲಿ ಈ 12 ದೇಶಗಳ ಪ್ರಜೆಗಳ ಪ್ರವೇಶದ ಮೇಲೆ ಸಂಪೂರ್ಣ ನಿರ್ಬಂಧವನ್ನು ಈ ಅಧ್ಯಾದೇಶ ವಿಧಿಸುತ್ತದೆ" ಎಂದು ಅಧಿಕೃತ ಪ್ರಕಟಣೆ ಹೇಳಿದೆ.
ಅಫ್ಘಾನಿಸ್ತಾನ, ಬರ್ಮಾ, ಛಡ್, ಕಾಂಗೊ ಗಣರಾಜ್ಯ, ಈಕ್ವಿಟೇರಿಯಲ್ ಗುನಿಯಾ, ಎರಿಟ್ರಿಯಾ, ಹೈಟಿ, ಇರಾನ್, ಲಿಬಿಯಾ, ಸೋಮಾಲಿಯಾ, ಸೂಡಾನ್ ಮತ್ತು ಯೆಮನ್ ಪ್ರಜೆಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಬುರುಂಡಿ, ಕ್ಯೂಬಾ, ಲಾವೋಸ್, ಸೆರ್ರಾಲಿಯೋನ್, ಟೋಗೊ, ತುರ್ಕಮೇನಿಸ್ತಾನ ಮತ್ತು ವೆನೆಜುವೆಲಾ ದೇಶಗಳ ಪ್ರಜೆಗಳ ಪ್ರವೇಶವನ್ನು ಭಾಗಶಃ ಮಿತಿಗೊಳಿಸಲಾಗಿದೆ.
ಅಮೆರಿಕವನ್ನು ಅಪಾಯಕಾರಿ ವಿದೇಶಿಯರಿಂದ ರಕ್ಷಿಸುವ ಮತ್ತು ನಮ್ಮ ದೇಶಕ್ಕೆ ಹಾನಿ ಮಾಡದಂತೆ ತಡೆಯುವ ಭರವಸೆಯನ್ನು ಈ ಆದೇಶದ ಮೂಲಕ ಈಡೇರಿಸಿದ್ದಾರೆ ಎಂದು ಶ್ವೇತಭವನದ ವಕ್ತಾರ ಅಬಿಜೈಲ್ ಜಾಕ್ಸನ್ ಎಕ್ಸ್ ಪೋಸ್ಟ್ನಲ್ಲಿ ವಿವರಿಸಿದ್ದಾರೆ.







