ಎಪ್ಸ್ಟೀನ್ ಫೈಲ್ಸ್ | ಟ್ರಂಪ್ ಕನಿಷ್ಠ 8 ಬಾರಿ ಎಪ್ಸ್ಟೀನ್ ನ ವಿಮಾನಗಳಲ್ಲಿ ಪ್ರಯಾಣಿಸಿದ್ದ ದಾಖಲೆಗಳು ಬಹಿರಂಗ

Photo Credit : AP
ವಾಷಿಂಗ್ಟನ್: ಮೃತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಗೆ ಸಂಬಂಧಿಸಿದಂತೆ ಯುಎಸ್ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ಹೊಸ ದಾಖಲೆಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರು ಕಾಣಿಸಿಕೊಂಡಿದೆ.
ಎಪ್ಸ್ಟೀನ್ ನ ಖಾಸಗಿ ವಿಮಾನ ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ಟ್ರಂಪ್ ಕನಿಷ್ಠ ಎಂಟು ಬಾರಿ ಎಪ್ಸ್ಟೀನ್ ವಿಮಾನಗಳಲ್ಲಿ ಪ್ರಯಾಣಿಸಿದ್ದಾಗಿ ಉಲ್ಲೇಖಿಸಲಾಗಿದೆ. ಆದರೆ, ಈ ದಾಖಲೆಗಳ ಆಧಾರದಲ್ಲಿ ಟ್ರಂಪ್ ವಿರುದ್ಧ ಯಾವುದೇ ಅಪರಾಧದ ಆರೋಪಗಳಿಲ್ಲ ಎಂದು ಫೆಡರಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಮೆರಿಕ ಕಾಂಗ್ರೆಸ್ ಅಂಗೀಕರಿಸಿದ ಹೊಸ ಕಾನೂನಿನ ಅನ್ವಯವಾಗಿ ಮಂಗಳವಾರ ಬಿಡುಗಡೆಗೊಂಡ ಈ ದಾಖಲೆಗಳು ಸುಮಾರು 29 ಸಾವಿರ ಪುಟಗಳನ್ನು ಒಳಗೊಂಡಿವೆ. ಇದರಲ್ಲಿ ತನಿಖೆಗೆ ಸಂಬಂಧಿಸಿದ ಪತ್ರವ್ಯವಹಾರಗಳು, ಫೋಟೋಗಳು ಹಾಗೂ ಜೈಲಿನೊಳಗೆ ಚಿತ್ರೀಕರಿಸಲಾಗಿದೆ ಎನ್ನಲಾದ ಕೆಲವು ವೀಡಿಯೊ ದೃಶ್ಯಗಳೂ ಸೇರಿವೆ. ಎಪ್ಸ್ಟೀನ್ 2019ರಲ್ಲಿ ನ್ಯೂಯಾರ್ಕ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನು.
ದಾಖಲೆಗಳಲ್ಲಿ ಸೇರಿರುವ ಇಮೇಲ್ ಒಂದರಲ್ಲಿ, 2020ರ ಜನವರಿ 8ರಂದು ನ್ಯೂಯಾರ್ಕ್ ದಕ್ಷಿಣ ಜಿಲ್ಲಾ ಸಹಾಯಕ ಯುಎಸ್ ವಕೀಲರು, ಟ್ರಂಪ್ ಎಪ್ಸ್ಟೀನ್ ನ ಖಾಸಗಿ ಜೆಟ್ ವಿಮಾನದಲ್ಲಿ ಪ್ರಯಾಣಿಸಿದ್ದಾಗಿ “ವರದಿಯಾಗಿದೆ ಅಥವಾ ತಿಳಿದಿದೆ” ಎಂದು ಉಲ್ಲೇಖಿಸಿದ್ದಾರೆ. ಇಮೇಲ್ ಕಳುಹಿಸಿದವರು ಮತ್ತು ಸ್ವೀಕರಿಸಿದವರ ವಿವರಗಳನ್ನು ನ್ಯಾಯಾಂಗ ಇಲಾಖೆ ಮರೆಮಾಚಿದೆ.
ಒಂದು ವಿಮಾನ ಪ್ರಯಾಣದ ದಾಖಲೆಯಲ್ಲಿ ಟ್ರಂಪ್, ಎಪ್ಸ್ಟೀನ್ ಹಾಗೂ 20 ವರ್ಷದ ಮಹಿಳೆಯೊಬ್ಬರು ಮಾತ್ರ ಪ್ರಯಾಣಿಕರಾಗಿ ಪಟ್ಟಿ ಮಾಡಲಾಗಿದೆ. ಆ ಮಹಿಳೆಯ ಗುರುತಿನ ವಿವರಗಳನ್ನು ಮರೆಮಾಚಲಾಗಿದೆ. ಇನ್ನು ಎರಡು ವಿಮಾನಗಳಲ್ಲಿ ಪಟ್ಟಿ ಮಾಡಲಾದ ಮಹಿಳೆಯರು, ಎಪ್ಸ್ಟೀನ್ ಸಹಚರಿಯಾಗಿದ್ದ ಘಿಸ್ಲೇನ್ ಮ್ಯಾಕ್ಸ್ ವೆಲ್ ಪ್ರಕರಣದಲ್ಲಿ ಸಂಭಾವ್ಯ ಸಾಕ್ಷಿಗಳಾಗಿರಬಹುದೆಂದು ದಾಖಲೆಗಳು ಸೂಚಿಸುತ್ತವೆ. ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಎಪ್ಸ್ಟೀನ್ ಗೆ ಸಹಾಯ ಮಾಡಿದ ಆರೋಪದಲ್ಲಿ ಮ್ಯಾಕ್ಸ್ ವೆಲ್ ಗೆ 20 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ.
ಈ ನಡುವೆ, ನ್ಯಾಯಾಂಗ ಇಲಾಖೆ, ಕೆಲವು ದಾಖಲೆಗಳಲ್ಲಿ ಟ್ರಂಪ್ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ಆಧಾರರಹಿತ ಎಂದು ಹೇಳಿದೆ. ಇವುಗಳಲ್ಲಿ ಕೆಲವು 2020ರ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಎಫ್ಬಿಐ ಗೆ ಸಲ್ಲಿಸಲಾದವು ಎಂದು ತಿಳಿಸಿದೆ.
“ಈ ಆರೋಪಗಳಿಗೆ ಯಾವುದೇ ವಿಶ್ವಾಸಾರ್ಹತೆ ಇದ್ದಿದ್ದರೆ, ಈಗಾಗಲೇ ಅಧ್ಯಕ್ಷ ಟ್ರಂಪ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿತ್ತು,” ಎಂದು ಯುಎಸ್ ನ್ಯಾಯಾಂಗ ಇಲಾಖೆ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ದಾಖಲೆಗಳಲ್ಲಿ ಹೆಸರು ಕಾಣಿಸಿಕೊಂಡಿರುವುದರಿಂದ ಮಾತ್ರ ಅಪರಾಧ ಸಾಬೀತಾಗುವುದಿಲ್ಲ ಎಂದು ಅಧಿಕಾರಿಗಳು ಪುನರುಚ್ಚರಿಸಿದ್ದಾರೆ.







