ಇರಾನ್ ಶಾಂತಿ ಮಾತುಕತೆ ವಿಫಲವಾದರೆ ಪ್ರಾಜೆಕ್ಟ್ ಫ್ರೀಡಂಗೆ ಮತ್ತೆ ಚಾಲನೆ: ಟ್ರಂಪ್ ಎಚ್ಚರಿಕೆ

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಮೇ 9: ಇರಾನ್ ಶಾಂತಿ ಮಾತುಕತೆ ವಿಫಲವಾದರೆ ಅಮಾನತುಗೊಳಿಸಿರುವ ಕಡಲ ಭದ್ರತಾ ಉಪಕ್ರಮ ‘ಪ್ರಾಜೆಕ್ಟ್ ಫ್ರೀಡಂ’ಗೆ ತನ್ನ ಆಡಳಿತವು ಮತ್ತೆ ಚಾಲನೆ ನೀಡಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಇರಾನ್ ಜೊತೆಗಿನ ಪ್ರಸ್ತಾವಿತ ಮಾತುಕತೆ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸವಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಟ್ರಂಪ್, ‘ಒಪ್ಪಂದಕ್ಕೆ ಸಹಿ ಬೀಳದಿದ್ದರೆ ನಾವು ವಿಭಿನ್ನ ಮಾರ್ಗಕ್ಕೆ ಹೋಗುತ್ತೇವೆ ಮತ್ತು ‘ಪ್ರಾಜೆಕ್ಟ್ ಫ್ರೀಡಂ’ ಕಾರ್ಯಾಚರಣೆ ‘ಪ್ರಾಜೆಕ್ಟ್ ಫ್ರೀಡಂ ಪ್ಲಸ್’ ಆಗಿ ವಿಸ್ತಾರಗೊಳ್ಳಬಹುದು’ ಎಂದು ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ತಾನ ಹಾಗೂ ಇತರ ರಾಷ್ಟ್ರಗಳ ಕೋರಿಕೆಯ ಮೇರೆಗೆ ‘ಪ್ರಾಜೆಕ್ಟ್ ಫ್ರೀಡಂ’ ಅನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಆದರೆ ಇರಾನ್ ವಿರುದ್ಧದ ದಿಗ್ಬಂಧನ ಮುಂದುವರಿಯುತ್ತದೆ. ಒಪ್ಪಂದಕ್ಕೆ ಸಹಿ ಬೀಳುವ ನಿರೀಕ್ಷೆಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಮಂಗಳವಾರ ಘೋಷಿಸಿದ್ದರು.
►ಬೆದರಿಕೆಗೆ ಮಣಿದು ಒಪ್ಪಂದ ಸಾಧ್ಯವಿಲ್ಲ: ಇರಾನ್
ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, ‘ಬೆದರಿಕೆ ಅಥವಾ ಒತ್ತಡದಡಿ ಯಾವುದೇ ಒಪ್ಪಂದವನ್ನು ಮಾಡಿಕೊಳ್ಳಲು ಇರಾನ್ ಬಯಸುವುದಿಲ್ಲ’ ಎಂದಿದ್ದಾರೆ.
‘ಅಮೆರಿಕದ ನಾಯಕತ್ವದ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳು ಮೂಡಿವೆ. ಅರೆಬಿಯನ್ ಕೊಲ್ಲಿಯಲ್ಲಿ ಅಮೆರಿಕದ ಪಡೆಗಳ ಇತ್ತೀಚಿನ ಉದ್ವಿಗ್ನತೆ ಮತ್ತು ಕದನ ವಿರಾಮವನ್ನು ಉಲ್ಲಂಘಿಸುವ ಅವರ ಹಲವಾರು ಕ್ರಮಗಳು, ರಾಜತಾಂತ್ರಿಕತೆಯ ಹಾದಿಯ ಕುರಿತು ಅಮೆರಿಕದ ಗಂಭೀರತೆಯ ಬಗ್ಗೆ ಸಂದೇಹ ಮೂಡಿಸಿವೆ’ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.






