ಬಗ್ರಾಮ್ ವಾಯುನೆಲೆ ಹಸ್ತಾಂತರಿಸದಿದ್ದರೆ ಕಠಿಣ ಶಿಕ್ಷೆ: ತಾಲಿಬಾನ್ಗೆ ಟ್ರಂಪ್ ಎಚ್ಚರಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್, ಸೆ.21: ಬಗ್ರಾಮ್ ವಾಯುನೆಲೆಯನ್ನು ಅಫ್ಘಾನಿಸ್ತಾನವು ಅಮೆರಿಕಾಕ್ಕೆ ಮರಳಿಸದಿದ್ದರೆ ಅನಿರೀಕ್ಷಿತ ಶಿಕ್ಷೆ ಕಾದಿದೆ ಎಂದು ತಾಲಿಬಾನ್ ನೇತೃತ್ವದ ಸರಕಾರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಒಡ್ಡಿರುವುದಾಗಿ ವರದಿಯಾಗಿದೆ.
ಬಗ್ರಾಮ್ ವಾಯುನೆಲೆಯನ್ನು ನಿರ್ಮಿಸಿದ ಅಮೆರಿಕಾಕ್ಕೆ ಅದನ್ನು ಹಿಂದಿರುಗಿಸದಿದ್ದರೆ ಕೆಟ್ಟ ಸಂಗತಿಗಳು ಸಂಭವಿಸಲಿವೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಶನಿವಾರ ಟ್ರಂಪ್ ಪೋಸ್ಟ್ ಮಾಡಿದ್ದಾರೆ.
ಅಫ್ಘಾನಿಸ್ತಾನದ ಪರ್ವಾನ್ ಪ್ರಾಂತದಲ್ಲಿರುವ ಬಗ್ರಾಮ್ ವಾಯುನೆಲೆ ಈ ಹಿಂದೆ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಅತೀ ದೊಡ್ಡ ಮಿಲಿಟರಿ ನೆಲೆಯಾಗಿತ್ತು. ಇದನ್ನು ಅಮೆರಿಕನ್ನರು ವಿಸ್ತರಿಸಿ ಆಧುನೀಕರಣಗೊಳಿಸಿದ್ದಾರೆ. 2001ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರವನ್ನು ಅಮೆರಿಕ ನೇತೃತ್ವದ ಮೈತ್ರಿ ಪಡೆ ಪದಚ್ಯುತಗೊಳಿಸಿದ ಯುದ್ಧದಲ್ಲಿ ಇದನ್ನು ಕೇಂದ್ರಬಿಂದುವಾಗಿ ಅಮೆರಿಕ ಬಳಸಿತ್ತು. 2021ರಲ್ಲಿ ಅಮೆರಿಕ ನೇತೃತ್ವದ ಮೈತ್ರಿಪಡೆ ಅಫ್ಘಾನಿಸ್ತಾನದಿಂದ ನಿರ್ಗಮಿಸಿದ ಬಳಿಕ ಈ ವಾಯುನೆಲೆಯನ್ನು ತಾಲಿಬಾನ್ ವಶಕ್ಕೆ ಪಡೆದಿದೆ. ಇತ್ತೀಚೆಗೆ ತಾಲಿಬಾನ್ ನೇತೃತ್ವದ ಅಫ್ಘಾನ್ ಸರಕಾರವು ಚೀನಾಕ್ಕೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಬಗ್ರಾಮ್ ವಾಯುನೆಲೆಯನ್ನು ಮತ್ತೆ ನಿಯಂತ್ರಣಕ್ಕೆ ಪಡೆಯುವ ಹೇಳಿಕೆಯನ್ನು ಟ್ರಂಪ್ ನೀಡಿದ್ದಾರೆ.
ಆದರೆ ಬಗ್ರಾಮ್ ವಾಯುನೆಲೆಯ ಬಗ್ಗೆ ಒಪ್ಪಂದ ಸಾಧ್ಯವೇ ಇಲ್ಲ ಎಂದು ತಾಲಿಬಾನ್ ರವಿವಾರ ಸ್ಪಷ್ಟಪಡಿಸಿದೆ. `ವಾಯುನೆಲೆಯನ್ನು ಮರಳಿ ನಿಯಂತ್ರಣಕ್ಕೆ ಪಡೆಯುವ ಒಪ್ಪಂದದ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಕೆಲವರು ಹೇಳಿಕೆ ನೀಡಿದ್ದಾರೆ. ಆದರೆ ಅಫ್ಘಾನಿಸ್ತಾನದ ಒಂದು ಇಂಚಿನಷ್ಟು ನೆಲದ ಬಗ್ಗೆಯೂ ಒಪ್ಪಂದ ಸಾಧ್ಯವಿಲ್ಲ. ನಮಗೆ ಅದರ ಅಗತ್ಯವೂ ಇಲ್ಲ' ಎಂದು ಅಫ್ಘಾನಿಸ್ತಾನದ ರಕ್ಷಣಾ ಇಲಾಖೆಯ ಮೂಲಗಳು ಹೇಳಿಕೆ ನೀಡಿವೆ.





