ಪುಟಿನ್ ಷರತ್ತು ಒಪ್ಪಿಕೊಳ್ಳದಿದ್ದರೆ ಉಕ್ರೇನ್ ನಾಶವಾಗುತ್ತದೆ : ಝೆಲೆನ್ಸ್ಕಿಗೆ ಟ್ರಂಪ್ ಎಚ್ಚರಿಕೆ

ವೊಲೊದಿಮಿರ್ ಝೆಲೆನ್ಸ್ಕಿ, ಅಧ್ಯಕ್ಷ ಟ್ರಂಪ್ | Photo Credit : AP| PTI
ವಾಷಿಂಗ್ಟನ್, ಅ.20: ಉಕ್ರೇನ್ನಲ್ಲಿನ ಯುದ್ಧ ಕೊನೆಗೊಳಿಸಲು ರಶ್ಯ ಅಧ್ಯಕ್ಷ ಪುಟಿನ್ ಮುಂದಿರಿಸಿರುವ ಷರತ್ತನ್ನು ಒಪ್ಪಿಕೊಳ್ಳುವಂತೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಯನ್ನು ಅಮೆರಿಕಾ ಅಧ್ಯಕ್ಷ ಟ್ರಂಪ್ ಆಗ್ರಹಿಸಿರುವುದಾಗಿ ವರದಿಯಾಗಿದೆ.
ಪುಟಿನ್ ಬಗ್ಗೆ ಟ್ರಂಪ್ರಲ್ಲಿ ಹತಾಶೆಯ ಭಾವನೆ ಹೆಚ್ಚುತ್ತಿರುವುದರಿಂದ ಈ ಅವಕಾಶ ಬಳಸಿಕೊಂಡು ಅಮೆರಿಕದಿಂದ ಹೆಚ್ಚಿನ ಬೆಂಬಲ ಪಡೆಯುವ ಉದ್ದೇಶದಿಂದ ಶ್ವೇತಭವನದಲ್ಲಿ ಟ್ರಂಪ್ರನ್ನು ಭೇಟಿಯಾಗಿದ್ದ ಝೆಲೆನ್ಸ್ಕಿಗೆ ನಿರಾಶೆಯಾಗಿದೆ. ಝೆಲೆನ್ಸ್ಕಿಯ ವಿರುದ್ಧ ಟ್ರಂಪ್ ಕೂಗಾಡಿದರು, ಮತ್ತು ಉಕ್ರೇನ್ನ ಮುಂಚೂಣಿ ಕ್ಷೇತ್ರದ ಸ್ಥಿತಿಗತಿಯನ್ನು ತೋರಿಸಲು ಝೆಲೆನ್ಸ್ಕಿ ಮುಂದಿರಿಸಿದ್ದ ನಕ್ಷೆಯನ್ನು ಬಿಸಾಡಿ ಆಕ್ರೋಶ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.
ಟ್ರಂಪ್ ಅವರ ಅನಿರೀಕ್ಷಿತ ವರ್ತನೆಯಿಂದ ಝೆಲೆನ್ಸ್ಕಿ ಹಾಗೂ ಅವರ ತಂಡ ಕಕ್ಕಾಬಿಕ್ಕಿಯಾಗಿದೆ. ಅಮೆರಿಕದಿಂದ ದೀರ್ಘ ಶ್ರೇಣಿಯ ಟಾಮ್ಹಾಕ್ ಕ್ರೂಸ್ ಕ್ಷಿಪಣಿಗಳನ್ನು ಪಡೆಯಲು ಟ್ರಂಪ್ ಅನುಮೋದನೆ ಕೋರಿದ್ದ ಝೆಲೆನ್ಸ್ಕಿಗೆ ನಿರಾಶೆಯಾಗಿದ್ದು ಅವರು ಬರಿಗೈಯಲ್ಲಿ ಮರಳುವಂತಾಗಿದೆ ಎಂದು `ಫೈನಾನ್ಶಿಯಲ್ ಟೈಮ್ಸ್' ವರದಿ ಮಾಡಿದೆ.





