ಸೆನೆಟ್ ಚುನಾವಣೆ ಫಲಿತಾಂಶ ತಡೆಯುವ ಟ್ರಂಪ್ ಆಡಳಿತದ ಪ್ರಯತ್ನ ವಜಾ

ಡೊನಾಲ್ಡ್ ಟ್ರಂಪ್ | Photo Credit : AP
ವಾಶಿಂಗ್ಟನ್, ನ. 2: ರಿಪಬ್ಲಿಕನ್ ಸೆನೆಟರ್ ಡ್ಯಾನ್ ಸುಲ್ಲಿವಾನ್ ಸೋತರೆ ಅಲಾಸ್ಕಾ ಸೆನೆಟ್ ಚುನಾವಣೆಯ ಫಲಿತಾಂಶ ಪ್ರಮಾಣೀಕರಣವನ್ನು ತಡೆಯಲು ಟ್ರಂಪ್ ಆಡಳಿತ ನಡೆಸಿದ್ದ ಪ್ರಯತ್ನವನ್ನು ಅಲ್ಲಿನ ಫೆಡರಲ್ ನ್ಯಾಯಾಧೀಶರು ವಜಾಗೊಳಿಸಿದ್ದಾರೆ.
ಅಲಾಸ್ಕಾದಲ್ಲಿ ಡ್ಯಾನ್ ಸುಲ್ಲಿವಾನ್ ಎಂಬ ಹೆಸರಿನ ಇಬ್ಬರು ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರಲ್ಲಿ ಒಬ್ಬರು ಹಾಲಿ ರಿಪಬ್ಲಿಕನ್ ಸೆನೆಟರ್ ಡ್ಯಾನ್ ಸುಲ್ಲಿವಾನ್. ಮತ್ತೊಬ್ಬರು ನಿವೃತ್ತ ಶಿಕ್ಷಕ ಡೇನಿಯಲ್ ಜೆ. ಸುಲ್ಲಿವಾನ್.
ಒಂದೇ ರೀತಿಯ ಹೆಸರುಗಳಿಂದ ಮತದಾರರಲ್ಲಿ ಗೊಂದಲ ಉಂಟಾಗಿರಬಹುದು ಎಂಬುದು ಟ್ರಂಪ್ ಆಡಳಿತದ ವಾದವಾಗಿತ್ತು. ಹೀಗಾಗಿ ಎರಡನೇ ಅಭ್ಯರ್ಥಿಗೆ ಚಲಾವಣೆಯಾದ ಮತಗಳನ್ನು ತನಿಖೆ ನಡೆಸುವವರೆಗೆ ಚುನಾವಣೆಯ ಫಲಿತಾಂಶವನ್ನು ಪ್ರಮಾಣೀಕರಿಸಬಾರದು ಎಂದು ನ್ಯಾಯಾಂಗ ಇಲಾಖೆ ನ್ಯಾಯಾಲಯವನ್ನು ಕೋರಿತ್ತು.
ಆದರೆ, ಮತದಾರರ ಗೌಪ್ಯತೆಗೆ ಧಕ್ಕೆ ಉಂಟಾಗದಂತೆ ಈಗಾಗಲೇ ಚಲಾವಣೆಯಾದ ಮತಗಳನ್ನು ಪ್ರತ್ಯೇಕಿಸಿ ತನಿಖೆ ನಡೆಸಲು ಕಾರ್ಯಸಾಧ್ಯವಾದ ಯೋಜನೆಯನ್ನು ನ್ಯಾಯಾಂಗ ಇಲಾಖೆ ನೀಡಿಲ್ಲ ಎಂದು ನ್ಯಾಯಾಧೀಶೆ ಶಾರನ್ ಗ್ಲೀಸನ್ ಹೇಳಿದ್ದಾರೆ.
ಈಗಾಗಲೇ ಅನೇಕ ಮತದಾರರು ಮತ ಚಲಾಯಿಸಿದ್ದು, ಮತಪತ್ರಗಳನ್ನು ಪ್ರತ್ಯೇಕಿಸುವುದು ಮತ್ತು ಯಾವ ಮತದಾರರು ಯಾರಿಗೆ ಮತ ಹಾಕಿದ್ದಾರೆ ಎಂಬುದನ್ನು ಪತ್ತೆಹಚ್ಚುವುದು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ, ಇಂತಹ ಪ್ರಕರಣ ದಾಖಲಿಸಲು ಫೆಡರಲ್ ಸರ್ಕಾರಕ್ಕೆ ಕಾನೂನುಬದ್ಧ ಅಧಿಕಾರವಿಲ್ಲ ಎಂಬ ಅಂಶವನ್ನೂ ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.
ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ನ್ಯಾಯಾಂಗ ಇಲಾಖೆ ತಿಳಿಸಿದೆ.






