ಅಮೆರಿಕ | ಕೊಲಂಬಿಯಾ ವಿವಿಯ ಫೆಲೆಸ್ತೀನ್ ಪರ ಹೋರಾಟಗಾರ ಖಲೀಲ್ ಬಂಧನ ; ಇದು ಆರಂಭವಷ್ಟೇ ಎಂದ ಟ್ರಂಪ್

ಮಹಮೂದ್ ಖಲೀಲ್ | indiatoday.in
ವಾಶಿಂಗ್ಟನ್: ಕೊಲಂಬಿಯಾ ವಿವಿಯ ಫೆಲೆಸ್ತೀನ್ ಪರ ವಿದ್ಯಾರ್ಥಿ ಹೋರಾಟಗಾರ ಮಹಮೂದ್ ಖಲೀಲ್ ಅವರನ್ನು ಬಂಧಿಸಲಾಗಿದ್ದು, ಗಡಿಪಾರು ಮಾಡುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡ್ರೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.
ಇದು ಆರಂಭವಷ್ಟೇ ಎಂದು ಎಚ್ಚರಿಸಿರುವ ಅವರು, ತಮ್ಮ ಆಡಳಿತದಲ್ಲಿ ಇಸ್ರೇಲ್ ಮತ್ತು ಗಾಝಾ ಯುದ್ಧದ ವಿರುದ್ಧ ಧ್ವನಿಯೆತ್ತುವ ಫೆಲೆಸ್ತೀನ್ ಪರ ಹೋರಾಟಗಾರರನ್ನು ಹತ್ತಿಕ್ಕಲಾಗುವುದು ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ರುತ್ ನಲ್ಲಿ ಈ ಕುರಿತು ಸುದೀರ್ಘ ಪೋಸ್ಟನ್ನು ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್, ಫೆಲೆಸ್ತೀನ್ ಪರ ಪ್ರತಿಭಟನಾಕಾರರಲ್ಲಿ ಹಲವರು ವಿದ್ಯಾರ್ಥಿಗಳಲ್ಲ. ಅವರೆಲ್ಲಾ ಹಣಕ್ಕಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವ ಚಳುವಳಿಗಾರರು ಎಂದು ಆರೋಪಿಸಿದ್ದಾರೆ.
ತನ್ನ ಆಡಳಿತವು ಯಹೂದಿ ವಿರೋಧಿ ಪ್ರತಿಭಟನಾಕಾರರನ್ನು, ಅಮೆರಿಕ ವಿರೋಧಿ ಭಯೋತ್ಪಾದನಾ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ನಮ್ಮ ದೇಶದೊಳಗೆ ಭಯೋತ್ಪಾದನೆಯ ಬಗ್ಗೆ ಸಹಾನುಭೂತಿ ಹೊಂದಿರುವವರನ್ನು ನಾವು ಹುಡುಕುತ್ತೇವೆ. ಅವರನ್ನು ಬಂಧಿಸಿ ಗಡೀಪಾರು ಮಾಡುತ್ತೇವೆ. ಅವರೆಂದಿಗೂ ಮತ್ತೆ ಅಮೆರಿಕಕ್ಕೆ ಹಿಂದಿರುಗಲು ಸಾಧ್ಯವಿಲ್ಲ. ನೀವು ಮುಗ್ಧ ಜನರನ್ನು, ಮಹಿಳೆಯರನ್ನು ಮತ್ತು ಮಕ್ಕಳನ್ನು ಹತ್ಯೆ ಮಾಡುವುದು ಸೇರಿದಂತೆ ಭಯೋತ್ಪಾದನೆಯನ್ನು ಬೆಂಬಲಿಸಿದರೆ, ನಿಮ್ಮಿಂದ ನಮ್ಮ ರಾಷ್ಟ್ರೀಯ ಮತ್ತು ವಿದೇಶಾಂಗ ನೀತಿಯ ಹಿತಾಸಕ್ತಿಗಳಿಗೆ ಅಡ್ಡಿಯಾಗಲಿದೆ. ನಿಮಗೆ ಇಲ್ಲಿ ಸ್ವಾಗತವಿಲ್ಲ. ಅಮೆರಿಕದ ಪ್ರತಿಯೊಂದು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಇದನ್ನು ಪಾಲಿಸಬೇಕೆಂದು ನಾವು ನಿರೀಕ್ಷಿಸುತ್ತೇವೆ ಎಂದು ಟ್ರಂಪ್ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಕಾನೂನುಬದ್ಧವಾಗಿ ಅಮೆರಿಕದ ನಿವಾಸಿಯಾಗಿರುವ ಖಲೀಲ್ ಡಿಸೆಂಬರ್ ವರೆಗೆ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಯಾಗಿದ್ದರು. ಶನಿವಾರ ನ್ಯೂಯಾರ್ಕ್ನಲ್ಲಿ ಅಮೆರಿಕದ ಫೆಡರಲ್ ವಲಸೆ ಅಧಿಕಾರಿಗಳು ಅವರನ್ನು ಬಂಧಿಸಿ ಲೂಸಿಯಾನದಲ್ಲಿರುವ ವಲಸಿಗರ ಜೈಲಿಗಟ್ಟಿದ್ದಾರೆ.
ಈ ಮಧ್ಯೆ ಖಲೀಲ್ ಅವರ ವಕೀಲರು, ಅವರ ಬಂಧನವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. ಫೆಡರಲ್ ನ್ಯಾಯಾಧೀಶರು ಬುಧವಾರ ನ್ಯಾಯಾಲಯದ ವಿಚಾರಣೆಗೆ ನಿಗದಿಪಡಿಸಿದ್ದರಿಂದ ಖಲೀಲ್ ಅವರ ಗಡೀಪಾರು ಪ್ರಕ್ರಿಯೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ.
ಕಳೆದ ವರ್ಷ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಫೆಲೆಸ್ತೀನ್ ಪರ ಪ್ರತಿಭಟನೆಗಳಲ್ಲಿ 30 ವರ್ಷದ ಖಲೀಲ್ ಪ್ರಮುಖರಾಗಿ ಮುನ್ನಡೆಸಿದ್ದರು. ಇದು ಇಸ್ರೇಲ್ ಕಣ್ಣುಕುಕ್ಕಿತ್ತು. ಖಲೀಲ್ ಅವರನ್ನು ಗಡಿಪಾರು ಮಾಡುವಂತೆ ಟ್ರಂಪ್ ಆಡಳಿತಕ್ಕೆ ಇಸ್ರೇಲ್ ಒತ್ತಡ ಹಾಕಿತ್ತು ಎಂದು ಸಿಬಿಎಸ್ ವರದಿ ಮಾಡಿದೆ.