ಮೊದಲ ಪತ್ರಿಕಾಗೋಷ್ಠಿಯಲ್ಲೇ ಎಡವಟ್ಟು ಮಾಡಿಕೊಂಡಿದ್ದ ಟ್ರಂಪ್ ಪತ್ರಿಕಾ ಕಾರ್ಯದರ್ಶಿ ಕೇಟೀ ಝಕಾರಿಯಾ ಐದೇ ದಿನಕ್ಕೆ ವಜಾ!

ಕೇಟೀ ಝಕಾರಿಯಾ Photo: x.com/Complex
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಕೇಟೀ ಝಕಾರಿಯಾ ಐದೇ ದಿನಗಳಲ್ಲಿ ಹುದ್ದೆ ಕಳೆದುಕೊಂಡಿದ್ದಾರೆ ಎಂದು ಅಧ್ಯಕ್ಷರ ಸಲಹೆಗಾರರು ತಿಳಿಸಿದ್ದಾರೆ. ಮೊದಲ ಪತ್ರಿಕಾಗೋಷ್ಠಿಯಲ್ಲಿನ ನಿರ್ವಹಣೆ ಹಾಗೂ ವೃತ್ತಿಪರ ಅರ್ಹತೆಯ ಕುರಿತು ಎದ್ದ ಪ್ರಶ್ನೆಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ ಎಂದು CNN ವರದಿ ಮಾಡಿದೆ.
ತಮ್ಮ ಹುದ್ದೆಯಲ್ಲಿ ಮುಂದುವರಿಯಬೇಕೇ ಎಂಬುದನ್ನು ಮತ್ತೊಮ್ಮೆ ಯೋಚಿಸುವಂತೆ ಟ್ರಂಪ್ ಅವರು ಝಕಾರಿಯಾ ಅವರಿಗೆ ಸೂಚಿಸಿದ್ದರು. ‘ನಾನು ನಿಮ್ಮ ಸ್ಥಾನದಲ್ಲಿದ್ದರೆ, ಈ ಹುದ್ದೆಯಲ್ಲಿ ಮುಂದುವರಿಯಬೇಕೇ ಎಂಬುದನ್ನು ಖಂಡಿತವಾಗಿಯೂ ಮರುಪರಿಶೀಲಿಸುತ್ತಿದ್ದೆ’ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ಟ್ರಂಪ್ ಹೇಳಿದರು.
ಟ್ರಂಪ್ ಅವರು ಝಕಾರಯಾ ಅವರ ಹುದ್ದೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ‘ಕೇಟೀ, ನೀವು ಈ ಕೆಲಸದಲ್ಲಿ ಮುಂದುವರಿಯಬೇಕೇ? ನನಗನ್ನಿಸುವಂತೆ ನೀವು ಮುಂದುವರಿಯುವ ಅಗತ್ಯವಿಲ್ಲ’ ಎಂದು ಹೇಳಿದ್ದಾಗಿ ತಿಳಿಸಿದರು.
ಜಾರ್ಜಿಯಾಗೆ ರಾಜಕೀಯ ರ್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಮಾತನಾಡಿದ ಟ್ರಂಪ್, ಮಾಧ್ಯಮಗಳು ಝಕಾರಿಯಾ ಅವರನ್ನು ಕಠಿಣವಾಗಿ ಟೀಕಿಸಿವೆ ಎಂದರು. ಝಕಾರಿಯಾ ತಮ್ಮ ನಿಷ್ಠಾವಂತ ಬೆಂಬಲಿಗರಲ್ಲಿ ಒಬ್ಬರು ಎಂದು ಹೇಳಿದರೂ, ಅಧ್ಯಕ್ಷರ ಪರವಾಗಿ ಮಾತನಾಡುವ ಪತ್ರಿಕಾ ಕಾರ್ಯದರ್ಶಿ ಹುದ್ದೆಗೆ ಅವರು ಸೂಕ್ತರಲ್ಲ ಎಂಬ ಅಭಿಪ್ರಾಯವನ್ನು ಟ್ರಂಪ್ ವ್ಯಕ್ತಪಡಿಸಿದರು.
‘ಬಹುಶಃ ಈ ಕೆಲಸ ಅವರಿಗೆ ಒಗ್ಗುವುದಿಲ್ಲ’ ಎಂದು ಟ್ರಂಪ್ ಹೇಳಿದರು. ಆದರೆ, ಝಕಾರಿಯಾ ಅವರನ್ನು ವ್ಯಕ್ತಿಯಾಗಿ ಗೌರವಿಸುವುದಾಗಿ ಅಧ್ಯಕ್ಷರಿಗೆ ಆಪ್ತರಾಗಿರುವ ಮೂಲವೊಂದು CNNಗೆ ತಿಳಿಸಿದೆ. ಶುಕ್ರವಾರ ರಾತ್ರಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಅವರ ಕುಟುಂಬದೊಂದಿಗೆ ಝಕಾರಿಯಾ ಹಾಗೂ ಅವರ ಕುಟುಂಬವು ಭೋಜನಕೂಟದಲ್ಲಿ ಪಾಲ್ಗೊಳ್ಳಲಿದೆ ಎಂದೂ ಮೂಲಗಳು ತಿಳಿಸಿವೆ.
ಮೂರು ಪ್ರಶ್ನೆಗಳಿಗೆ ಮಾತ್ರ ಉತ್ತರ
ಟಿವಿಯಲ್ಲಿ ಕನ್ಸರ್ವೇಟಿವ್ ವಿಚಾರಧಾರೆಯನ್ನು ಬೆಂಬಲಿಸುವ ರಾಜಕೀಯ ವಿಶ್ಲೇಷಕಿಯಾಗಿ ಗುರುತಿಸಿಕೊಂಡಿದ್ದ ಝಕಾರಿಯಾ ಅವರು ಟ್ರಂಪ್ ಅವರ ಗಮನ ಸೆಳೆದಿದ್ದರು. ಅಧ್ಯಕ್ಷರ ಬಗ್ಗೆ ಟೀಕಾತ್ಮಕ ಹೇಳಿಕೆಗಳನ್ನು ನೀಡಿದ್ದ ಇತರ ಅಭ್ಯರ್ಥಿಗಳನ್ನು ಪರಿಗಣನೆಯಿಂದ ಕೈಬಿಟ್ಟ ಬಳಿಕ ಅವರನ್ನು ತ್ವರಿತವಾಗಿ ನೇಮಕ ಮಾಡಲಾಗಿತ್ತು.
ಆದರೆ, ಮಂಗಳವಾರ ನಡೆದ ಮೊದಲ ಪತ್ರಿಕಾಗೋಷ್ಠಿಯಲ್ಲೇ ಅವರು ಎಡವಿದ್ದರು. ಆತಂಕಗೊಂಡಂತೆ ಕಂಡುಬಂದ ಅವರು ಕೇವಲ ಮೂರು ಪ್ರಶ್ನೆಗಳಿಗೆ ಉತ್ತರಿಸಿದ್ದರು. ಬಳಿಕ ತಮ್ಮ ವಕೀಲರ ಅರ್ಹತಾ ಪರೀಕ್ಷೆ (ಬಾರ್ ಪರೀಕ್ಷೆ)ಗೆ ಸಂಬಂಧಿಸಿದ ಪ್ರಶ್ನೆಗೆ ಗೊಂದಲಮಯ ಉತ್ತರ ನೀಡಿದ್ದರು. ನೇಮಕದ ವೇಳೆ ಟ್ರಂಪ್ ಅವರನ್ನು ವಕೀಲೆ ಎಂದು ಬಣ್ಣಿಸಿದ್ದರು. ಆದರೆ, ಫಾಕ್ಸ್ ನ್ಯೂಸ್ ನ ಸಂದರ್ಶನಗಳಲ್ಲಿ ಝಕಾರಿಯಾ ತಾವು ಬಾರ್ ಪರೀಕ್ಷೆಯಲ್ಲಿ ಎಂದಿಗೂ ಉತ್ತೀರ್ಣರಾಗಿಲ್ಲ ಎಂದು ಒಪ್ಪಿಕೊಂಡಿದ್ದರು. ಮತ್ತೆ ಪತ್ರಿಕಾಗೋಷ್ಠಿ ನಡೆಸುವ ಬಗ್ಗೆ ಕೇಳಿದ ಪ್ರಶ್ನೆಗೂ ಸ್ಪಷ್ಟ ಉತ್ತರ ನೀಡಿರಲಿಲ್ಲ.
ಈ ಬೆಳವಣಿಗೆಗಳು ಝಕಾರಿಯಾ ಅವರ ಅಧಿಕಾರಾವಧಿ ಎಷ್ಟು ಕಾಲ ಮುಂದುವರಿಯಬಹುದು ಎಂಬ ಪ್ರಶ್ನೆಯನ್ನು ಶ್ವೇತಭವನದಲ್ಲೇ ಹುಟ್ಟುಹಾಕಿದ್ದವು. ಅವರ ಮೊದಲ ಪತ್ರಿಕಾಗೋಷ್ಠಿಯ ನಿರ್ವಹಣೆ ಅಷ್ಟೊಂದು ಕೆಟ್ಟದಾಗಿರಲಿಲ್ಲ ಎಂದು ಟ್ರಂಪ್ ಆರಂಭದಲ್ಲಿ ಭಾವಿಸಿದ್ದರು. ಆದರೆ, ಗುರುವಾರ ರಾತ್ರಿ ಫಾಕ್ಸ್ ನ್ಯೂಸ್ ನಲ್ಲಿ ಸೀನ್ ಹ್ಯಾನಿಟಿ ಅವರೊಂದಿಗೆ ನಡೆಸಿದ ಸಂದರ್ಶನ ಸೇರಿದಂತೆ ನಂತರದ ಸಂದರ್ಶನಗಳು ಹಾಗೂ ಆಪ್ತರೊಂದಿಗಿನ ಚರ್ಚೆಗಳು ಅವರ ನಿರ್ಧಾರ ಬದಲಾವಣೆಗೆ ಕಾರಣವಾದವು ಎಂದು ಮೂಲಗಳು CNNಗೆ ತಿಳಿಸಿವೆ.
ಈ ವಾರ ಸಲಹೆಗಾರರೊಂದಿಗೆ ಮಾತನಾಡುವಾಗ, ಝಕಾರಿಯಾ ಈ ಜವಾಬ್ದಾರಿ ನಿರ್ವಹಿಸಲು ಇನ್ನೂ ಸಿದ್ಧರಾಗಿರಲಿಲ್ಲ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದರು ಎಂದು ಮೂಲವೊಂದು ಉಲ್ಲೇಖಿಸಿದೆ.
ಝಕಾರಿಯಾ ಅವರ ಐದು ದಿನಗಳ ಅಧಿಕಾರಾವಧಿಯು, 2017ರಲ್ಲಿ ಶ್ವೇತಭವನದ ಸಂವಹನ ನಿರ್ದೇಶಕರಾಗಿ 11 ದಿನಗಳ ಕಾಲ ಕಾರ್ಯನಿರ್ವಹಿಸಿದ್ದ ಆಂಥೋನಿ ಸ್ಕಾರಮುಚ್ಚಿ ಅವರ ಅವಧಿಗಿಂತಲೂ ಕಡಿಮೆಯಾಗಿದೆ. ಶ್ವೇತಭವನದಲ್ಲಿ ಅಲ್ಪಾವಧಿಯಲ್ಲೇ ಹುದ್ದೆ ಕಳೆದುಕೊಳ್ಳುವ ಅಧಿಕಾರಿಗಳ ಅಧಿಕಾರಾವಧಿಯನ್ನು ಅಳೆಯಲು ಸ್ಕಾರಮುಚ್ಚಿ ಅವರ 11 ದಿನಗಳ ಅವಧಿಯನ್ನು ಮಾನದಂಡವಾಗಿ ಬಳಸಲಾಗುತ್ತದೆ.






