ಪೋಪ್ ಲಿಯೋ ವಿರುದ್ಧ ಟ್ರಂಪ್ ಹೇಳಿಕೆ: ಕ್ರೈಸ್ತರಿಂದ ಆಕ್ರೋಶ, ಕ್ಷಮೆಯಾಚನೆಗೆ ಒತ್ತಾಯ

ಪೋಪ್ ಲಿಯೋ XIV, ಡೊನಾಲ್ಡ್ ಟ್ರಂಪ್ (Photo Credit : AP / PTI)
ವಾಷಿಂಗ್ಟನ್, ಎ.14: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪೋಪ್ ಲಿಯೋ ವಿರುದ್ಧ ಮಾಡಿದ್ದ ಹೇಳಿಕೆ ಹಾಗೂ ತಮ್ಮನ್ನು ಯೇಸುವಿನಂತೆ ಬಿಂಬಿಸಿದ ಸಾಮಾಜಿಕ ಜಾಲತಾಣದ ಪೋಸ್ಟ್ ಅಮೆರಿಕದ ಕ್ರೈಸ್ತ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬಳಿಕ ಆ ಪೋಸ್ಟ್ ಅನ್ನು ಅಳಿಸಿದರೂ, ವಿವಾದ ತೀವ್ರಗೊಂಡಿದೆ.
ಅಮೆರಿಕದ ಕ್ರಿಶ್ಚಿಯನ್ ಸಮುದಾಯದ ಹಲವು ಹಿರಿಯ ಮುಖಂಡರು ಟ್ರಂಪ್ ಅವರು ಪೋಪ್ ಲಿಯೋ ಅವರಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. US Conference of Catholic Bishopsನ ಅಧ್ಯಕ್ಷ ಆರ್ಚ್ ಬಿಷಪ್ ಪಾಲ್ ಕೋಕ್ಲಿ, ಟ್ರಂಪ್ ಅವರ ಹೇಳಿಕೆಗಳನ್ನು “ಅವಮಾನಕರ, ಈ ರೀತಿಯ ಮಾತುಗಳು ಕ್ರೈಸ್ತ ಮೌಲ್ಯಗಳಿಗೆ ವಿರುದ್ಧವಾಗಿವೆ. ಇದರಿಂದ ನಾನು ತೀವ್ರ ನಿರಾಶೆಗೊಂಡಿದ್ದೇನೆ” ಎಂದು ತಿಳಿಸಿದ್ದಾರೆ.
ಮಿನ್ನೇಸೋಟ ಮೂಲದ ಬಿಷಪ್ ರಾಬರ್ಟ್ ಬ್ಯಾರನ್ ಅವರು, ಟ್ರಂಪ್ ಅವರ ಹೇಳಿಕೆಗಳನ್ನು “ಸಂಪೂರ್ಣವಾಗಿ ಅನುಚಿತ ಹಾಗೂ ಅಗೌರವಪೂರ್ಣ. ಅಧ್ಯಕ್ಷರು ತಕ್ಷಣವೇ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.
ಕ್ರಿಶ್ಚಿಯನ್ ಬ್ರಾಡ್ ಕಾಸ್ಟಿಂಗ್ ನೆಟ್ ವರ್ಕ್ ನ ಪ್ರಮುಖ ನಿರೂಪಕ ಡೇವಿಡ್ ಬ್ರಾಡಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಈ ಪೋಸ್ಟ್ ಅನ್ನು ತೆಗೆದುಹಾಕಿ ಅಧ್ಯಕ್ಷರೇ. ನೀವು ದೇವರಲ್ಲ; ನಮ್ಮಲ್ಲಿ ಯಾರೂ ದೇವರಲ್ಲ. ಇದು ಮಿತಿಯನ್ನು ಮೀರುತ್ತದೆ” ಎಂದು X ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್ ಬರೆದಿದ್ದಾರೆ.
ಇನ್ನೊಂದೆಡೆ, ಶ್ವೇತಭವನದ ಸಲಹಾ ಮಂಡಳಿಯ ಸದಸ್ಯ ರಾಲ್ಫ್ ರೀಡ್ ಅವರು ಟ್ರಂಪ್ ಅವರನ್ನು ಸಮರ್ಥಿಸಿಕೊಂಡು, “ಅಧ್ಯಕ್ಷರ ಮೇಲಿನ ಆಳವಾದ ಬೆಂಬಲ ಇಂತಹ ಸಾಮಾಜಿಕ ಜಾಲತಾಣದ ಪೋಸ್ಟ್ಗಳಿಂದ ಕುಂದುವುದಿಲ್ಲ” ಎಂದು ಹೇಳಿದ್ದಾರೆ.
2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕದ ಬಹುಪಾಲು ಕ್ಯಾಥೋಲಿಕ್ ಮತದಾರರು ಟ್ರಂಪ್ ಅವರಿಗೆ ಬೆಂಬಲ ನೀಡಿದ್ದರು.






