ಟರ್ಕಿಗೆ 304 ದಶಲಕ್ಷ ಡಾಲರ್ ಮೌಲ್ಯದ ಕ್ಷಿಪಣಿ ಮಾರಾಟಕ್ಕೆ ಅಮೆರಿಕ ಅನುಮೋದನೆ

ಸಾಂದರ್ಭಿಕ ಚಿತ್ರ | PC : NDTV
ವಾಷಿಂಗ್ಟನ್: ವ್ಯಾಪಾರ ಮತ್ತು ರಕ್ಷಣಾ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತೊಂದು ಉಪಕ್ರಮವಾಗಿ ಟರ್ಕಿಗೆ 304 ದಶಲಕ್ಷ ಡಾಲರ್ ಮೌಲ್ಯದ ಕ್ಷಿಪಣಿಗಳನ್ನು ಮಾರಾಟ ಮಾಡಲು ಅಮೆರಿಕ ಅನುಮೋದಿಸಿದೆ.
ಗುರುವಾರ ನಡೆಯಲಿರುವ ನೇಟೊ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಟರ್ಕಿಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲೇ ಈ ಒಪ್ಪಂದಕ್ಕೆ ಅನುಮೋದನೆ ದೊರೆತಿದೆ. ಆದರೆ ಇದಕ್ಕೆ ಅಮೆರಿಕ ಸಂಸತ್ನ ಸಹಿ ಬಾಕಿಯಿದೆ. ಟರ್ಕಿಯು 53 ಸುಧಾರಿತ ಮಧ್ಯಮ ಶ್ರೇಣಿಯ ಆಗಸದಿಂದ ಆಗಸಕ್ಕೆ ಉಡಾಯಿಸುವ ಕ್ಷಿಪಣಿಗಳು ಹಾಗೂ 60 ಬ್ಲಾಕ್ ಕ್ಷಿಪಣಿಗಳ ಪೂರೈಕೆಗೆ ಕೋರಿಕೆ ಸಲ್ಲಿಸಿದೆ ಎಂದು ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ ಹೇಳಿದೆ.
ಟರ್ಕಿಯು ರಶ್ಯದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿರುವುದು ಮತ್ತು ಸಿರಿಯಾದ ಕುರ್ಡಿಷ್ ಸಶಸ್ತ್ರ ಹೋರಾಟಗಾರರಿಗೆ ಅಮೆರಿಕದ ಬೆಂಬಲ ನೀಡಿರುವುದು ಎರಡೂ ದೇಶಗಳ ಸಂಬಂಧಗಳಲ್ಲಿ ಬಿರುಕು ಮೂಡಿಸಿದೆ. ದ್ವಿಪಕ್ಷೀಯ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ನಡುವೆ ಮಾತುಕತೆ ನಡೆಯುವ ನಿರೀಕ್ಷೆಯಿದೆ.





