ಇಸ್ರೇಲ್ ಜೊತೆಗಿನ ಎಲ್ಲಾ ವ್ಯಾಪಾರ ಸಂಬಂಧಗಳನ್ನು ಕಡಿದುಕೊಳ್ಳುವುದಾಗಿ ಘೋಷಿಸಿದ ತುರ್ಕಿಯ

Photo |indiatoday
ಅಂಕಾರಾ : ಗಾಝಾದ ಮೇಲೆ ಇಸ್ರೇಲ್ ದಾಳಿ ಮುಂದುವರಿದ ಹಿನ್ನೆಲೆ ಇಸ್ರೇಲ್ ಜೊತೆಗಿನ ಎಲ್ಲಾ ವಾಣಿಜ್ಯ ಮತ್ತು ಆರ್ಥಿಕ ಸಂಬಂಧಗಳನ್ನು ಸಂಪೂರ್ಣವಾಗಿ ಕಡಿದುಕೊಳ್ಳುವುದಾಗಿ ತುರ್ಕಿಯ ಘೋಷಿಸಿದೆ. ಇದಲ್ಲದೆ ಇಸ್ರೇಲ್ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ, ತುರ್ಕಿಯ ಹಡಗುಗಳು ಇಸ್ರೇಲ್ ಬಂದರುಗಳಿಗೆ ಹೋಗುವುದನ್ನು ನಿಷೇಧಿಸಿದೆ.
“ಇಸ್ರೇಲ್ ಸೇನೆ ಗಾಝಾ ಮೇಲೆ ನಡೆಸುತ್ತಿರುವ ದಾಳಿ ತಕ್ಷಣ ನಿಲ್ಲದಿದ್ದರೆ ಅದು ಸಂಪೂರ್ಣ ಪ್ರದೇಶವನ್ನು ಯುದ್ಧಕ್ಕೆ ತಳ್ಳಬಹುದು. ಅಂತಾರಾಷ್ಟ್ರೀಯ ಸಮುದಾಯ ಇಸ್ರೇಲ್ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳು ಇಸ್ರೇಲ್ಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು” ಎಂದು ತುರ್ಕಿಯ ವಿದೇಶಾಂಗ ಸಚಿವ ಹಾಕನ್ ಫಿದಾನ್ ಹೇಳಿದ್ದಾರೆ.
"ನಾವು ಇಸ್ರೇಲ್ ಜೊತೆಗಿನ ನಮ್ಮ ವ್ಯಾಪಾರವನ್ನು ಸಂಪೂರ್ಣವಾಗಿ ಕಡಿತಗೊಳಿಸಿದ್ದೇವೆ. ತುರ್ಕಿಯ ಹಡಗುಗಳು ಇಸ್ರೇಲ್ ಬಂದರಿಗೆ ಹೋಗುವುದನ್ನು ನಾವು ಅನುಮತಿಸುವುದಿಲ್ಲ. ಇದಲ್ಲದೆ ಇಸ್ರೇಲ್ ವಿಮಾನಗಳು ನಮ್ಮ ವಾಯುಪ್ರದೇಶವನ್ನು ಪ್ರವೇಶಿಸಲು ನಾವು ಅನುಮತಿಸುವುದಿಲ್ಲ” ಎಂದು ಅಂಕಾರಾದಲ್ಲಿ ಗಾಝಾ ಕುರಿತ ವಿಶೇಷ ಸಂಸತ್ತಿನ ಚರ್ಚೆಯಲ್ಲಿ ಹಾಕನ್ ಫಿದಾನ್ ಹೇಳಿರುವುದಾಗಿ ವರದಿಯಾಗಿದೆ.





