Turkey | ಬ್ಯಾಸ್ಕೆಟ್ ಬಾಲ್ ಅಂಗಳದಲ್ಲಿ ಮಾನವೀಯತೆಯ ಆಟ; ಫೆಲೆಸ್ತೀನ್ ನ ಮಕ್ಕಳಿಗಾಗಿ ಕ್ರೀಡಾಂಗಣಕ್ಕೆ ಸಾವಿರಾರು ಆಟಿಕೆಗಳ ಸುರಿಮಳೆ!
ಅಭಿಮಾನಿಗಳ ವಿಶಿಷ್ಟ ಮಾನವೀಯ ಅಭಿಯಾನ; ಆಟಿಕೆ, ಚಳಿಗಾಲದ ಉಡುಪುಗಳ ದೇಣಿಗೆ

Photo Credit : instagram
ಗಾಝಿಯಾಂಟೆಪ್ (ತುರ್ಕಿಯೆ): ಯುದ್ಧದ ಸಂಕಷ್ಟದಲ್ಲಿ ಸಿಲುಕಿರುವ ಫೆಲೆಸ್ತೀನ್ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸುವ ಉದ್ದೇಶದಿಂದ ತುರ್ಕಿಯೆಯ ಬ್ಯಾಸ್ಕೆಟ್ ಬಾಲ್ ಅಭಿಮಾನಿಗಳು ವಿಶಿಷ್ಟ ಮಾನವೀಯ ಅಭಿಯಾನ ನಡೆಸಿದ್ದಾರೆ. ಪಂದ್ಯದ ಆರಂಭಕ್ಕೂ ಮುನ್ನ ಸಾವಿರಾರು ಆಟಿಕೆಗಳು, ಗೊಂಬೆಗಳು ಹಾಗೂ ಚಳಿಗಾಲದ ಉಡುಪುಗಳನ್ನು ಕ್ರೀಡಾಂಗಣದ ಅಂಗಳಕ್ಕೆ ಎಸೆದು ತಮ್ಮ ಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ.
ನ. 28ರಂದು ಗಾಝಿಯಾಂಟೆಪ್ ಬಾಸ್ಕೆಟ್ ಬಾಲ್ ಮತ್ತು ಫೆನರ್ ಬಾಹ್ಸೆ ಗೆಲಿಸಿಮ್ ತಂಡಗಳ ನಡುವಿನ ಪಂದ್ಯದ ಹಿನ್ನೆಲೆಯಲ್ಲಿ ಕಾಮಿಲ್ ಓಕಾಕ್ ಸ್ಪೋರ್ಟ್ಸ್ ಹಾಲ್ ನಲ್ಲಿ ಈ ಅಭಿಯಾನ ನಡೆಯಿತು. ಪಂದ್ಯ ವೀಕ್ಷಿಸಲು ಆಗಮಿಸಿದ್ದ ಅಭಿಮಾನಿಗಳು ಸ್ಟ್ಯಾಂಡ್ ಗಳಿಂದ ಸಾವಿರಾರು ಗೊಂಬೆಗಳು, ಆಟಿಕೆಗಳು ಹಾಗೂ ಚಳಿಗಾಲದ ಉಡುಪುಗಳನ್ನು ಅಂಗಳಕ್ಕೆ ಎಸೆದರು. ಕ್ಷಣಾರ್ಧದಲ್ಲಿ ಇಡೀ ಅಂಗಳ ಆಟಿಕೆಗಳು ಮತ್ತು ಬಟ್ಟೆಗಳಿಂದ ತುಂಬಿಹೋಯಿತು.
ಈ ಸಂದರ್ಭದಲ್ಲಿ ಅಭಿಮಾನಿಗಳು ತುರ್ಕಿಯೆ ಮತ್ತು ಫೆಲೆಸ್ತೀನ್ ಧ್ವಜಗಳನ್ನು ಬೀಸುತ್ತಾ ಫೆಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದರು. 'ಲೀವ್ ಫೆಲೆಸ್ಟೀನಾ' (ಫೆಲೆಸ್ತೀನ್ ಚಿರಾಯುವಾಗಲಿ) ಎಂಬ ಗೀತೆಗೆ ಧ್ವನಿಗೂಡಿಸಿ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಸೆಹಿತ್ಕಾಮಿಲ್ ಮುನ್ಸಿಪಲಿಟಿಯ ವತಿಯಿಂದ ಫೆಲೆಸ್ತೀನ್ ಜನರಿಗೆ ಬೆಂಬಲ ಸೂಚಿಸಿ ಬೃಹತ್ ಒಗ್ಗಟ್ಟಿನ ರ್ಯಾ ಲಿ ಆಯೋಜಿಸಲಾಗಿತ್ತು. 'ಆಕ್ರಮಣದ ವಿರುದ್ಧ ದಂಗೆ, ಫೆಲೆಸ್ತೀನ್ ಗೆ ಸ್ವಾತಂತ್ರ್ಯ ನೀಡಿ' ಎಂಬ ಘೋಷಣೆಯೊಂದಿಗೆ ನಡೆದ ರ್ಯಾ ಲಿಯಲ್ಲಿ ಸಾವಿರಾರು ಗಾಝಿಯಾಂಟೆಪ್ ನಿವಾಸಿಗಳು ಪಾಲ್ಗೊಂಡಿದ್ದರು.
ಕ್ರೀಡಾಂಗಣದ ಅಂಗಳಕ್ಕೆ ಎಸೆಯಲಾದ ಆಟಿಕೆಗಳು ಮತ್ತು ಉಡುಪುಗಳನ್ನು ಬಳಿಕ ಸಿಬ್ಬಂದಿ ಹಾಗೂ ಸ್ವಯಂಸೇವಕರು ಸಂಗ್ರಹಿಸಿ ಪೆಟ್ಟಿಗೆಗಳಲ್ಲಿ ತುಂಬಿದರು. ಇವುಗಳನ್ನು ಫೆಲೆಸ್ತೀನ್ ಗೆ ಮಾನವೀಯ ನೆರವಿನ ರೂಪದಲ್ಲಿ ಕಳುಹಿಸಲು ಸಿದ್ಧಪಡಿಸಲಾಯಿತು.
ಗಾಝಾದಲ್ಲಿ ಸಂಘರ್ಷದಿಂದ ಸಂಕಷ್ಟಕ್ಕೀಡಾಗಿರುವ ಮಕ್ಕಳ ನೋವಿನತ್ತ ಜಾಗತಿಕ ಗಮನ ಸೆಳೆಯುವುದು, ತುರ್ಕಿಯೆ ಮತ್ತು ಫೆಲೆಸ್ತೀನ್ ಜನರ ನಡುವಿನ ಒಗ್ಗಟ್ಟನ್ನು ಪ್ರತಿಬಿಂಬಿಸುವುದು ಹಾಗೂ ಯುದ್ಧದ ಸಂತ್ರಸ್ತ ಮಕ್ಕಳಿಗೆ ಪ್ರಾಯೋಗಿಕ ನೆರವು ಒದಗಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.






