ಲ್ಯಾಂಡಿಂಗ್ ವೇಳೆ ದಿಢೀರ್ ಕೆಳಕ್ಕೆ ಕುಸಿದ ವಿಮಾನ!; ಪ್ರಯಾಣಿಕರ ಕಿರುಚಾಟದ ವೀಡಿಯೋ ವೈರಲ್

Screengrab from video shared on Instagram by @mmaiskaya
ಟ್ಯುನಿಶ್: ಗುರುವಾರ ಇಸ್ತಾನ್ಬುಲ್ ನಿಂದ ಟುನೀಶಿಯಾಗೆ ತೆರಳುತ್ತಿದ್ದ ಟರ್ಕಿಶ್ ಏರ್ಲೈನ್ಸ್ ವಿಮಾನವು ಲ್ಯಾಂಡಿಂಗ್ ವೇಳೆ ತೀವ್ರ ಪ್ರಕ್ಷುಬ್ಧತೆಗೆ ಸಿಲುಕಿದಾಗ ಪ್ರಯಾಣಿಕರು ಭಯಭೀತರಾಗಿ ಕಿರುಚಾಡಿದ ಘಟನೆ ನಡೆದಿದೆ. ಬಿರುಗಾಳಿಯ ವಾತಾವರಣದಲ್ಲಿ ವಿಮಾನವನ್ನು ಇಳಿಸಲು ಮೂರು ಬಾರಿ ಪ್ರಯತ್ನಿಸಿದ ಬಳಿಕ, ವಿಮಾನ ದಿಢೀರ್ ಕೆಳಕ್ಕೆ ಕುಸಿಯತೊಡಗಿತ್ತು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.
ವಿಮಾನವು ಟುನಿಸ್-ಕಾರ್ತೇಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿದ್ದಾಗ ಪ್ರತಿಕೂಲ ಹವಾಮಾನವು ಲ್ಯಾಂಡಿಂಗ್ ಗೆ ಅಡ್ಡಿಯಾಯಿತು. ಬಳಿಕ ವಿಮಾನವನ್ನು ಟುನಿಸ್ ನ ದಕ್ಷಿಣಕ್ಕೆ ಸುಮಾರು 60 ಮೈಲಿ ದೂರದಲ್ಲಿರುವ ಎನ್ಫಿಧಾ-ಹಮ್ಮಮೆಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು.
ಮರೀನಾ ಮೈಸ್ಕಾಯಾ ಎಂಬ ಪ್ರಯಾಣಿಕರು ಘಟನೆಯ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ವಿಮಾನ ತೀವ್ರವಾಗಿ ಅಲುಗಾಡುತ್ತಿದ್ದಂತೆ ಪ್ರಯಾಣಿಕರು ತಮ್ಮ ಸೀಟುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿರುವುದು ಹಾಗೂ ಕ್ಯಾಬಿನ್ನಾದ್ಯಂತ ಕಿರುಚಾಟ ಕೇಳಿಬರುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.
ಈ ಕುರಿತು ಬರೆದುಕೊಂಡಿರುವ ಅವರು, “ವಿಮಾನ ಹಾರಾಟವು ಸುಗಮವಾಗಿಯೇ ಇತ್ತು. ಆದರೆ ಟುನಿಸ್-ಕಾರ್ತೇಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾವು ಕೆಳಗಿಳಿಯಲು ಪ್ರಾರಂಭಿಸಿದ ತಕ್ಷಣ ಪರಿಸ್ಥಿತಿ ಸಂಪೂರ್ಣವಾಗಿ ಭಯಾನಕವಾಯಿತು” ಎಂದು ಹೇಳಿದ್ದಾರೆ. “ನನ್ನ ಜೀವಮಾನದಲ್ಲಿ ನಾನು ಎಂದಿಗೂ ಈ ರೀತಿಯ ಜೀವಭಯ ಅನುಭವಿಸಿರಲಿಲ್ಲ. ನನ್ನ ತಾಯಿ ಕೂಡ ನನ್ನೊಂದಿಗೆ ಇದ್ದರು” ಎಂದು ತಿಳಿಸಿದ್ದಾರೆ.
ವಿಮಾನವು ಹಠಾತ್ತನೆ ಎತ್ತರ ಕಳೆದುಕೊಳ್ಳುತ್ತಿದ್ದಂತೆ ಪ್ರಯಾಣಿಕರು ಕಿರುಚಾಡುತ್ತಿರುವುದು ಕೇಳಿಬಂದಿದೆ. “ಕೆಲವು ಸೆಕೆಂಡುಗಳ ಕಾಲ ನಾವು ಕೆಳಗೆ ಬೀಳುತ್ತಿರುವಂತೆ ಅನುಭವವಾಯಿತು” ಎಂದು ಅವರು ವೀಡಿಯೋದಲ್ಲಿ ಹೇಳಿದ್ದಾರೆ.
ಆದರೆ, ಈ ವೀಡಿಯೋದ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು TOI ವರದಿ ಮಾಡಿದೆ. ಅಂತಿಮವಾಗಿ ವಿಮಾನವನ್ನು ಎನ್ಫಿಧಾ-ಹಮ್ಮಮೆಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದ್ದು, ಅಲ್ಲಿ ಅದು ಸುರಕ್ಷಿತವಾಗಿ ಇಳಿಯಿತು ಎಂದು ತಿಳಿದುಬಂದಿದೆ.






