ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ತುರ್ಕಿಯ ಅಧ್ಯಕ್ಷ ಎರ್ದೋಗನ್

ತುರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೋಗನ್ (File Photo: AP/PTI)
ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನದಲ್ಲಿ ತುರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೋಗನ್ ಮತ್ತೊಮ್ಮೆ ಕಾಶ್ಮೀರ ಸಮಸ್ಯೆಯನ್ನು ಪ್ರಸ್ತಾಪಿಸಿ, ದಕ್ಷಿಣ ಏಷ್ಯಾದ ಶಾಂತಿ ಹಾಗೂ ಸ್ಥಿರತೆಯ ಬಗ್ಗೆ ಮಾತನಾಡಿದ್ದಾರೆ.
ಭಾರತ–ಪಾಕಿಸ್ತಾನಗಳ ನಡುವಿನ ಕದನ ವಿರಾಮವನ್ನು ಸ್ವಾಗತಿಸಿದ ಎರ್ದೋಗನ್, “ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವುದು ಅತ್ಯಂತ ಮುಖ್ಯ. ಕಳೆದ ಎಪ್ರಿಲ್ನಲ್ಲಿ ಉದ್ವಿಗ್ನತೆಯ ಬಳಿಕ ಸಾಧಿಸಲಾದ ಕದನ ವಿರಾಮದಿಂದ ನಾವು ಸಂತೋಷಪಟ್ಟಿದ್ದೇವೆ. ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಹಕಾರ ಅಗತ್ಯ. ಕಾಶ್ಮೀರದ ಸಹೋದರ ಸಹೋದರಿಯರ ಹಿತಕ್ಕಾಗಿ ವಿಶ್ವಸಂಸ್ಥೆಯ ನಿರ್ಣಯಗಳ ಆಧಾರದ ಮೇಲೆ, ಮಾತುಕತೆಯ ಮೂಲಕ ಪರಿಹಾರ ದೊರೆಯಲಿ ಎಂಬುದು ನಮ್ಮ ಆಶಯ” ಎಂದು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಎರ್ದೋಗನ್ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಕಾಶ್ಮೀರ ವಿಷಯವನ್ನು ನಿಯಮಿತವಾಗಿ ಉಲ್ಲೇಖಿಸುತ್ತಿದ್ದಾರೆ.
ಎಪ್ರಿಲ್ ತಿಂಗಳಲ್ಲಿ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಪ್ರತಿಯಾಗಿ ಭಾರತವು ಮೇ 7ರಂದು ಪಾಕಿಸ್ತಾನ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ “ಆಪರೇಷನ್ ಸಿಂಧೂರ್” ಪ್ರಾರಂಭಿಸಿತ್ತು. ನಾಲ್ಕು ದಿನಗಳ ತೀವ್ರ ಘರ್ಷಣೆಗಳ ನಂತರ, ಮೇ 10ರಂದು ಎರಡೂ ರಾಷ್ಟ್ರಗಳು ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಲು ಒಪ್ಪಿಕೊಂಡಿದ್ದವು.







