Saudi Arabia | ಹೆಲಿಕಾಪ್ಟರ್ ಪತನ: ಇಬ್ಬರು ಅಧಿಕಾರಿಗಳು ಮೃತ್ಯು
ರಿಯಾದ್ ಗುರಿಯಾಗಿಸಿಕೊಂಡು ಹೌತಿಗಳಿಂದ ಡ್ರೋನ್ ದಾಳಿ

Photo: Boeing
ರಿಯಾದ್: ಯೆಮನ್ ನ ಹೌತಿ ಸಶಸ್ತ್ರ ಗುಂಪಿನ ದಾಳಿಗಳ ಭೀತಿ ಎದುರಿಸುತ್ತಿರುವ ಸೌದಿ ಅರೇಬಿಯಾದಲ್ಲಿ ಹೆಲಿಕಾಪ್ಟರ್ ವೊಂದು ಪತನಗೊಂಡು ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದಾರೆ. ಇದೇ ವೇಳೆ, ರಾಜಧಾನಿ ರಿಯಾದ್ ಅನ್ನು ಗುರಿಯಾಗಿಸಿಕೊಂಡು ಬಂದ ಹಲವು ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿ ಸೌದಿ ನೇತೃತ್ವದ ಒಕ್ಕೂಟ ತಿಳಿಸಿದೆ.
ಸೌದಿ ಅರೇಬಿಯಾದ ನೈಋತ್ಯ ಭಾಗದಲ್ಲಿರುವ ನಜ್ರಾನ್ ಪ್ರದೇಶದಲ್ಲಿ ಸೌದಿ ರಾಷ್ಟ್ರೀಯ ಗಾರ್ಡ್ ಗೆ ಸೇರಿದ AH-6i ವಿಚಕ್ಷಣ ಹೆಲಿಕಾಪ್ಟರ್ ರವಿವಾರ ಪತನಗೊಂಡಿದೆ. ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ ಎಂದು ಯೆಮನ್ ನಲ್ಲಿ ಕಾನೂನುಬದ್ಧತೆಯನ್ನು ಪುನಃಸ್ಥಾಪಿಸುವ ಒಕ್ಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಲಿಕಿ ತಿಳಿಸಿದ್ದಾರೆ.
ರಾಷ್ಟ್ರೀಯ ಗಾರ್ಡ್ ಸಚಿವಾಲಯಕ್ಕೆ ಸೇರಿದ ಹೆಲಿಕಾಪ್ಟರ್, ಯೆಮನ್ ಗಡಿಯ ಸಮೀಪ ಸೌದಿ ಅರೇಬಿಯಾದ ಭೂಪ್ರದೇಶದಲ್ಲೇ ಪತನಗೊಂಡಿದೆ. ಅಪಘಾತದಲ್ಲಿ ಹೆಲಿಕಾಪ್ಟರ್ನಲ್ಲಿದ್ದ ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ಅಲ್-ಮಲಿಕಿ ಹೇಳಿದ್ದಾರೆ.
‘ತಾಂತ್ರಿಕ ದೋಷದಿಂದಾಗಿ ಹೆಲಿಕಾಪ್ಟರ್ ಪತನಗೊಂಡಿದ್ದು, ಅದರಲ್ಲಿದ್ದ ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದಾರೆ’ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೌತಿ ದಾಳಿಯ ಭೀತಿ
ಯೆಮನ್ನ ಹೌತಿ ಸಶಸ್ತ್ರ ಗುಂಪುಗಳಿಂದ ಹೊಸ ಅಲೆಯ ದಾಳಿಗಳ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಹೆಚ್ಚಿನ ಜಾಗರೂಕತೆ ವಹಿಸಿದೆ. ರಿಯಾದ್ ಅನ್ನು ಗುರಿಯಾಗಿಸಿಕೊಂಡು ಬಂದ ಹಲವು ಡ್ರೋನ್ ಗಳನ್ನು ಹೊಡೆದುರುಳಿಸಿರುವುದಾಗಿ ಸೌದಿ ನೇತೃತ್ವದ ಒಕ್ಕೂಟ ಹೇಳಿಕೊಂಡಿದೆ.
ಸೌದಿ ಅರೇಬಿಯಾದ ನೈಋತ್ಯ ಗಡಿಯಲ್ಲಿರುವ ನಜ್ರಾನ್, ಯೆಮನ್ ಗೆ ಹೊಂದಿಕೊಂಡಿದೆ. ಈ ಪ್ರದೇಶವು ಈ ಹಿಂದೆ ಹಲವು ಬಾರಿ ಹೌತಿ ದಾಳಿಗಳಿಗೆ ಗುರಿಯಾಗಿದೆ.






