ತೈವಾನ್ ಗೆ ಅಪ್ಪಳಿಸಿದ ಚಂಡಮಾರುತ, 190 ಮಂದಿಗೆ ಗಾಯ; ವಿಮಾನ ಸಂಚಾರ ಸ್ಥಗಿತ

ಸಾಂದರ್ಭಿಕ ಚಿತ್ರ
ತೈಪೆ : ಧಾರಾಕಾರ ಮಳೆ ಹಾಗೂ ದಾಖಲೆ ಮಟ್ಟದ ಬಿರುಗಾಳಿಯೊಂದಿಗೆ `ಕೊಯ್ನು' ಚಂಡಮಾರುತ ಗುರುವಾರ ದಕ್ಷಿಣ ತೈವಾನ್ಗೆ ಅಪ್ಪಳಿಸಿದ್ದು ಕನಿಷ್ಟ 190 ಮಂದಿ ಗಾಯಗೊಂಡಿದ್ದಾರೆ. ಶಾಲೆ, ಕಚೇರಿಗಳಿಗೆ ರಜೆ ಘೋಷಿಸಲಾಗಿದ್ದು ದೇಶೀಯ ಹಾಗೂ ಅಂತರಾಷ್ಟ್ರೀಯ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.
ತೈವಾನ್ನ ದಕ್ಷಿಣದ ತುದಿಯಾದ ಕೇಪ್ ಎಲುವಾನ್ಬಿಗೆ ಗುರುವಾರ ಬೆಳಿಗ್ಗೆ ಅಪ್ಪಳಿಸಿದ ಚಂಡಮಾರುತ ಪಶ್ಚಿಮದತ್ತ ಚಲಿಸುತ್ತಿರುವಂತೆ ದುರ್ಬಲಗೊಳ್ಳಲಿದ್ದು ದಕ್ಷಿಣ ಚೀನಾದ ಫುಜಿಯಾನ್ ಪ್ರಾಂತದತ್ತ ಸಾಗಲಿದೆ ಎಂದು ಹವಾಮಾನ ಇಲಾಖೆಯ ಮುಖ್ಯಸ್ಥ ಹುವಾಂಗ್ ಚಿಯಾ-ಮೆಯಿ ಹೇಳಿದ್ದಾರೆ. ಗಂಟೆಗೆ 342.7 ಕಿ.ಮೀ ವೇಗದ ಗಾಳಿಯೊಂದಿಗೆ ಚಂಡಮಾರುತ ಅಪ್ಪಳಿಸಿದ್ದು ಇದು ದಾಖಲೆಯಾಗಿದೆ. ಬಳಿಕ ನಿರಂತರ 198.7 ಕಿ.ಮೀ ವೇಗದ ಗಾಳಿ ಮುಂದುವರಿದಿದ್ದು ಇದೂ ಹೊಸ ದಾಖಲೆಯಾಗಿದೆ.
ಗಾಳಿಯ ರಭಸಕ್ಕೆ ಗಾಳಿಯ ವೇಗವನ್ನು ಅಳೆಯುವ ಯಂತ್ರ ಜಖಂಗೊಂಡಿದೆ ಎಂದು ಹುವಾಂಗ್ ಹೇಳಿದ್ದಾರೆ. ತೈವಾನ್ನ ತೈಚುಂಗ್, ತೈನಾನ್ ಮತ್ತು ಕಾಹ್ಸಿಯುಂಗ್ ಸೇರಿದಂತೆ ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ನಾಶ-ನಷ್ಟ ವರದಿಯಾಗಿದೆ. ಬಾಡಿಗೆ ದೋಣಿಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು ಹಲವು ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ. `ಕೊಯ್ನು' ಚಂಡಮಾರುತ ಈ ವಾರಾಂತ್ಯ ದಕ್ಷಿಣ ಚೀನಾದ ಕರಾವಳಿ ತೀರದತ್ತ ಸಾಗಲಿರುವ ಹಿನ್ನೆಲೆಯಲ್ಲಿ ಗ್ವಾಂಗ್ಝೌ ನಗರದಲ್ಲಿ ಶುಕ್ರವಾರದಿಂದ ಮುಂದಿನ ಸೂಚನೆಯವರೆಗೆ ಕೆಲವು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಲಾಗಿದೆ. ತೈವಾನ್ ಜಲಸಂಧಿಯ ಗಡಿಭಾಗದಲ್ಲಿರುವ ಫುಜಿಯಾನ್ ಪ್ರಾಂತದಲ್ಲಿ ಶುಕ್ರವಾರ 137 ಪ್ರಯಾಣಿಕರ ದೋಣಿ ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.







