`ರಾಗಸ' ಚಂಡಮಾರುತಕ್ಕೆ ತತ್ತರಿಸಿದ ತೈವಾನ್ : 14 ಮಂದಿ ಮೃತ್ಯು, 34 ಮಂದಿಗೆ ಗಾಯ

PC : X
ತೈಪೆ,ಸೆ.24: ಗಂಟೆಗೆ 195 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಅಪ್ಪಳಿಸಿದ `ರಾಗಸ' ಚಂಡಮಾರುತದ ಅಬ್ಬರಕ್ಕೆ ತೈವಾನ್ ತತ್ತರಿಸಿದೆ. ಹುವಾಲಿಯನ್ ಕೌಂಟಿಯಲ್ಲಿ ಸರೋವರದ ನೀರು ಉಕ್ಕಿ ಹರಿದು ಸೇತುವೆಯೊಂದು ಕೊಚ್ಚಿಹೋಗಿದ್ದು ಗುವಾಂಗ್ಪು ಪಟ್ಟಣವು ಜಲಾವೃತಗೊಂಡು ಕನಿಷ್ಠ 14 ಮಂದಿ ಮೃತಪಟ್ಟಿದ್ದು, 34ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 129 ಮಂದಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಹಾಂಕಾಂಗ್, ಮಕಾವು ಮತ್ತು ಫಿಲಿಪ್ಪೀನ್ಸ್ಗಳಲ್ಲೂ ರಾಗಸ ಚಂಡಮಾರುತ ಅಬ್ಬರಿಸಿದ್ದು ವ್ಯಾಪಕ ನಾಶ-ನಷ್ಟ ಸಂಭವಿಸಿದೆ. ತೈವಾನ್ನಲ್ಲಿ ಚಂಡಮಾರುತದ ಪ್ರಭಾವದಿಂದ ಸೋಮವಾರದಿಂದ ಧಾರಾಕಾರ ಮಳೆಯಾಗುತ್ತಿದ್ದು ಹುವಾಲಿಯನ್ ಕೌಂಟಿಯಲ್ಲಿ ಭೂಕುಸಿತದಿಂದ ಸರೋವರ ಸೃಷ್ಟಿಯಾಗಿತ್ತು. ಮಂಗಳವಾರ ಸರೋವರದ ದಡ ಒಡೆದಿದ್ದು ಸುಮಾರು 60 ದಶಲಕ್ಷ ಟನ್ಗಳಷ್ಟು ಜಲಪ್ರವಾಹ ಗುವಾಂಗ್ಫು ನಗರಕ್ಕೆ ಸುನಾಮಿಯಂತೆ ನುಗ್ಗಿದೆ. ಪ್ರಮುಖ ರಸ್ತೆಗಳಿಗೆ ನೀರು ನುಗ್ಗಿದ್ದು ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಪ್ರಮುಖ ಸೇತುವೆ ಕೊಚ್ಚಿಕೊಂಡು ಹೋಗಿ ಪ್ರಾಣ-ಹಾನಿ ಸಂಭವಿಸಿದೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಬುಧವಾರ ಬೆಳಿಗ್ಗೆ ಮತ್ತೆ ಪ್ರವಾಹದ ಮುನ್ಸೂಚನೆಯಾಗಿ ಸೈರನ್ ಮೊಳಗಿದ್ದು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಸ್ಥಳೀಯರಿಗೆ ಅಧಿಕಾರಿಗಳು ಸೂಚಿಸಿದರು. ತೈವಾನ್ನಾದ್ಯಂತ 7,600 ಜನರನ್ನು ಸ್ಥಳಾಂತರಿಸಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು 340 ಮಿಲಿಟರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಆಹಾರ ಮತ್ತು ನೀರನ್ನು ಪೂರೈಸಲಾಗುತ್ತಿದೆ.





