ಯುದ್ಧದ ನಡುವೆ ಅವಧಿ ಮೀರಿದ ವೀಸಾಗಳಿಗೆ ಸಡಿಲಿಕೆ ಘೋಷಿಸಿದ ಯುಎಇ: ವರದಿ

ಸಾಂದರ್ಭಿಕ ಚಿತ್ರ | Photo Credit : freepik
ಅಬುಧಾಬಿ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿರುವ ನಡುವೆಯೇ ವಿದೇಶಗಳಲ್ಲಿ ಸಿಲುಕಿಕೊಂಡಿರುವ ನಿವಾಸಿಗಳಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರ ಸಡಿಲಿಕೆ ಘೋಷಿಸಿದೆ. ಫೆಬ್ರವರಿ 28ರಿಂದ ವಿದೇಶಗಳಲ್ಲಿ ಉಳಿದುಕೊಂಡಿರುವಾಗಲೇ ನಿವಾಸಿ ವೀಸಾ ಅವಧಿ ಮುಗಿದಿರುವವರು ತಮ್ಮ ದೀರ್ಘಾವಧಿಯ ವಾಸ್ತವ್ಯ ವೀಸಾಗಳನ್ನು ನವೀಕರಿಸಿಕೊಳ್ಳಲು ಮಾರ್ಚ್ 31ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಯುಎಇ ಅಧಿಕಾರಿಗಳು ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
ಇರಾನ್–ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ಎರಡು ವಾರಗಳಿಂದ ಯುಎಇ ಪ್ರದೇಶವು ಇರಾನ್ ನಿಂದ ಬರುವ ಕ್ಷಿಪಣಿಗಳು ಮತ್ತು ಡ್ರೋನ್ ಗಳ ಅಲೆಗಳನ್ನು ಎದುರಿಸುತ್ತಿದೆ.
ಈ ಪರಿಸ್ಥಿತಿಯಿಂದಾಗಿ ಅನೇಕರು ವಿದೇಶಗಳಲ್ಲಿ ಸಿಲುಕಿಕೊಂಡಿದ್ದು, ಅವರ ವೀಸಾ ಅವಧಿ ಮುಗಿದಿರುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ತಾತ್ಕಾಲಿಕ ಸಡಿಲಿಕೆಯನ್ನು ನೀಡಿದೆ. ಇದರ ಮೂಲಕ ಪ್ರಭಾವಿತ ನಿವಾಸಿಗಳು ಯಾವುದೇ ದಂಡ ಅಥವಾ ಕಾನೂನು ತೊಂದರೆ ಎದುರಿಸದೆ ತಮ್ಮ ದೀರ್ಘಾವಧಿಯ ವಾಸ್ತವ್ಯ ವೀಸಾಗಳನ್ನು ನವೀಕರಿಸಿಕೊಳ್ಳಲು ಅವಕಾಶ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





