ಇನ್ಮುಂದೆ ಆಸ್ತಿ ಖರೀದಿ, ವ್ಯಾಪಾರ ಪರವಾನಗಿಯಿಲ್ಲದೆ ಭಾರತೀಯರಿಗೆ ಸಿಗಲಿದೆ ಯುಎಇ 'ಗೋಲ್ಡನ್ ವೀಸಾ'!

ಸಾಂದರ್ಭಿಕ ಚಿತ್ರ
ದುಬೈ: ಇನ್ಮುಂದೆ ಆಸ್ತಿ ಖರೀದಿ, ವ್ಯಾಪಾರ ಪರವಾನಗಿಯಿಲ್ಲದೆ ಭಾರತೀಯರಿಗೆ ಯುಎಇ ನಲ್ಲಿ 'ಗೋಲ್ಡನ್ ವೀಸಾ' ಸಿಗಲಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರವು ಪ್ರಾರಂಭಿಸಿರುವ ನೂತನದ ಗೋಲ್ಡನ್ ವೀಸಾ ನಿಯಮದನ್ವಯ ಭಾರತೀಯರು ಕೆಲವು ಷರತ್ತುಗಳೊಂದಿಗೆ ವೀಸಾ ಪಡೆಯಬಹುದಾಗಿದೆ.
ಇಲ್ಲಿಯವರೆಗೆ, ಭಾರತೀಯರು ಯು ಎ ಇ ಯ ಗೋಲ್ಡನ್ ವೀಸಾ ಪಡೆಯಬೇಕಿದ್ದರೆ ಕನಿಷ್ಠ 4.66 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಯುಎಇಯಲ್ಲಿ ಖರೀದಿಸಬೇಕಿತ್ತು ಅಥವಾ ಅದಕ್ಕೆ ಸಮಾನಾದ ಮೌಲ್ಯದ ಹಣವನ್ನು ಅಲ್ಲಿನ ವ್ಯಾಪಾರದಲ್ಲಿ ತೊಡಗಿಸಬೇಕಿತ್ತು.
ಈಗ ಯುಎಇ ಸರಕಾರವು ತಂದಿರುವ 'ಹೊಸ ನಾಮನಿರ್ದೇಶನ ಆಧಾರಿತ ವೀಸಾ ನೀತಿ'ಯ ಅನ್ವಯ ಭಾರತೀಯರು ಸುಮಾರು ಸುಮಾರು 23.30 ಲಕ್ಷ ರೂಪಾಯಿ ಶುಲ್ಕವನ್ನು ಪಾವತಿಸುವ ಮೂಲಕ ಯುಎಇಯ ಜೀವಿತಾವಧಿಯ 'ಗೋಲ್ಡನ್ ವೀಸಾ'ವನ್ನು ಪಡೆಯಬಹುದು ಎಂದು ಈ ವೀಸಾದ ಫಲಾನುಭವಿಗಳು ಮತ್ತು ವೀಸಾ ಪಡೆಯುವ ಪ್ರಕ್ರಿಯೆಯಲ್ಲಿ ತೊಡಗಿರುವ ಜನರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ರೀತಿಯ ವೀಸಾ ವಿತರಣೆಗೆ ಮೊದಲ ಹಂತದಲ್ಲಿ ಭಾರತ ಮತ್ತು ಬಾಂಗ್ಲಾದೇಶವನ್ನು ಆಯ್ಕೆ ಮಾಡಲಾಗಿದೆ. ಭಾರತದಲ್ಲಿ ಪ್ರಾಯೋಗಿಕ ನಾಮನಿರ್ದೇಶನ ಆಧಾರಿತ ಗೋಲ್ಡನ್ ವೀಸಾ ಪ್ರಕ್ರಿಯೆಯನ್ನು ಪರೀಕ್ಷಿಸಲು ರಾಯದ್ ಗ್ರೂಪ್ ಎಂಬ ಕನ್ಸಲ್ವೆನ್ಸಿ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ.
ಮೂರು ತಿಂಗಳಲ್ಲಿ 5,000ಕ್ಕೂ ಹೆಚ್ಚು ಭಾರತೀಯರು ಈ ನಾಮನಿರ್ದೇಶನ ಆಧಾರಿತ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು ರಾಯದ್ ಗ್ರೂಪ್ ತಿಳಿಸಿದೆ.