ಮಧ್ಯಪ್ರಾಚ್ಯ ಸಂಘರ್ಷ | UAEಯಲ್ಲಿ ಸಂಭವನೀಯ ಕ್ಷಿಪಣಿ ದಾಳಿ ಬೆದರಿಕೆ; ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ

Photo Credit : AP, PTI
ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮೇಲೆ ಸಂಭವನೀಯ ಕ್ಷಿಪಣಿ ದಾಳಿಯ ಕುರಿತು ಎಚ್ಚರಿಕೆ ನೀಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
UAEಯ ರಾಷ್ಟ್ರೀಯ ತುರ್ತು ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರ (NCEMA) ಸೋಮವಾರ ‘ಎಕ್ಸ್’ನಲ್ಲಿ ಈ ಕುರಿತು ಮಾಹಿತಿ ನೀಡಿದೆ. UAEಯ ವಾಯು ರಕ್ಷಣಾ ವ್ಯವಸ್ಥೆಗಳು ದೇಶವನ್ನು ಗುರಿಯಾಗಿಸಿಕೊಂಡಿರುವ ಕ್ಷಿಪಣಿ ಬೆದರಿಕೆಯನ್ನು ಪತ್ತೆಹಚ್ಚಿವೆ ಎಂದು ಪ್ರಾಧಿಕಾರ ತಿಳಿಸಿದೆ.
‘ಸುರಕ್ಷಿತ ಸ್ಥಳದಲ್ಲಿರಿ. ಅಧಿಕೃತವಾಗಿ ನೀಡುವ ಎಚ್ಚರಿಕೆಗಳು ಮತ್ತು ಮಾಹಿತಿ ಪಾಲಿಸಿ’ ಎಂದು NCEMA ಜನರಿಗೆ ಸೂಚಿಸಿದೆ.
ಇದೇ ವೇಳೆ, UAE ಆಂತರಿಕ ಸಚಿವಾಲಯವೂ ಜನರಿಗೆ ಎಚ್ಚರಿಕೆ ನೀಡಿದ್ದು, ಪ್ರಸ್ತುತ ಪರಿಸ್ಥಿತಿ ಮತ್ತು ಸಂಭವನೀಯ ಕ್ಷಿಪಣಿ ಬೆದರಿಕೆಯ ಹಿನ್ನೆಲೆಯಲ್ಲಿ ತಮ್ಮ ಸಮೀಪದ ಸುರಕ್ಷಿತ ಕಟ್ಟಡಕ್ಕೆ ತೆರಳಿ ಆಶ್ರಯ ಪಡೆಯುವಂತೆ ಸೂಚಿಸಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಹೋರಾಟವನ್ನು ಕೊನೆಗೊಳಿಸುವ ಉದ್ದೇಶದಿಂದ ಇರಾನ್ ಮತ್ತು ಅಮೆರಿಕ ನಡುವೆ ಮಾಡಿಕೊಂಡಿದ್ದ ತಿಳುವಳಿಕೆ ಒಪ್ಪಂದ (MoU) ಸೋಮವಾರ ಮುಕ್ತಾಯಗೊಂಡ ಒಂದು ದಿನದ ಬಳಿಕ UAEಯ ಈ ಎಚ್ಚರಿಕೆ ಹೊರಬಿದ್ದಿದೆ.






